ಬೆಂಗಳೂರು ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಸಿಇಟಿ-24ರ ಆಪ್ಷನ್ ಎಂಟ್ರಿ ಮಾಡಲು ಎಲ್ಲಿಯವರೆಗೂ ಸಮಯ ನೀಡಬೇಕು ಎಂಬುದನ್ನು ಮಂಗಳವಾರ (ಜು.30) ನಿರ್ಧರಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಮೊದಲನೇ ಸುತ್ತಿನ ಸೀಟು ಆಯ್ಕೆ ಮಾಡಿಕೊಳ್ಳಲು ಜು.23ರಿಂದ ಆಪ್ಷನ್ ಎಂಟ್ರಿ ಆರಂಭವಾಗಿದೆ. ಅಂದಿನಿಂದ 7 ದಿನಗಳವರೆಗೂ ಅಪ್ಷನ್ ಎಂಟ್ರಿ ದಾಖಲಿಸಬಹುದು ಎಂದು ಕೆಇಎ ತಿಳಿಸಿತ್ತು. ಆ ಪ್ರಕಾರ ಸೋಮವಾರ ಕೊನೆಯ ದಿನವಾಗಿದ್ದು, ಇನ್ನೂ ಕೆಲವು ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ದಾಖಲಿಸಿಲ್ಲ. ಈ ಕಾರಣದಿಂದ ಮತ್ತಷ್ಟು ಸಮಯ ವಿಸ್ತರಣೆ ಮಾಡಿದರೆ ಅನುಕೂಲವಾಗಲಿದೆ ಎಂಬ ಒತ್ತಾಯ ಕೇಳಿಬಂದಿದೆ.
ಅಲ್ಲದೆ, ವೈದ್ಯಕೀಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ವೇಳಾಪಟ್ಟಿ ಪ್ರಕಟವಾಗಿಲ್ಲದ ಕಾರಣ ಎಲ್ಲಿಯವರೆಗೂ ಆಪ್ಷನ್ ಎಂಟ್ರಿಗೆ ಅವಕಾಶವಿರಲಿದೆ ಎಂಬ ಗೊಂದಲವಿದೆ. ನಿಖರವಾಗಿ ಎಲ್ಲಿಯವರೆಗೂ ವಿಸ್ತರಣೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಲಿದೆ.
ಇದೇ ವೇಳೆ ಈ ವರೆಗೆ ನೋಂದಣಿ ಮಾಡಿಕೊಳ್ಳದ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೂ ನೋಂದಣಿ ಸಮಯವನ್ನು ತಿಳಿಸಲಿದೆ.