ನ್ಯೂಸ್

ಪ್ರಮಾಣ ಪತ್ರ ಉಚಿತ ವಸೂಲಿಯೂ ಖಚಿತ!

kumarvrl

ಬೆಂಗಳೂರು: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ (ಎಂಎಸ್​ಎಂಇ) ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ನೋಂದಣಿ ನೆಪದಲ್ಲಿ ಉದ್ಯಮಿಗಳಿಂದ ಶುಲ್ಕ, ದಾಖಲೆಗೆ ಕನ್ನ ಹಾಕಲಾಗುತ್ತಿದೆ. ಈ ಸಂಬಂಧ ವಿಜಯನಗರದ ಯುವ ಉದ್ಯಮಿ ಡಿ.ಯೋಗೇಶ್, ಪಶ್ಚಿಮ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರನ್ವಯ ಅಪರಿಚಿತರ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೊಸ ಉದ್ಯಮ ಆರಂಭಿಸುವ ಉದ್ದೇಶಕ್ಕೆ ಯೋಗೇಶ್, ಕೇಂದ್ರ ಸರ್ಕಾರದ ಎಂಎಸ್​ಎಂಇನಲ್ಲಿ ನೋಂದಣಿ ಮಾಡಿಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದಾರೆ. ಆಗ ಕೇಂದ್ರ ಸರ್ಕಾರದ ವೆಬ್​ಸೈಟ್​ಗೆ ಹೋಲಿಕೆ ಆಗುವಂತೆಯೇ WWW.MSME-gov.org/ ಲಿಂಕ್ ಸಿಕ್ಕಿದೆ.

ನೋಡಲು ಎಂಎಸ್​ಎಂಇ ಇಲಾಖೆಯದೇ ಎಂಬಂತೆ ಕಂಡ ಹಿನ್ನೆಲೆ ಯೋಗೇಶ್, ಅದರಲ್ಲಿ ಹೆಸರು, ವಿಳಾಸ, ಮೊಬೈಲ್ ನಂಬರ್, ಆಧಾರ್, ಪಾನ್ ಸೇರಿ ಎಲ್ಲ ವಿವರಗಳನ್ನು ಅಪ್​ಲೋಡ್ ಮಾಡಿದ್ದಾರೆ. ನಂತರ ನೋಂದಣಿ ಶುಲ್ಕ 1,850 ರೂ. ಪಾವತಿ ಮಾಡಿದ್ದಾರೆ. ಪ್ರತಿಯಾಗಿ ಯೋಗೇಶ್ ಇ-ಮೇಲ್​ಗೆ ರಸೀದಿ ಬಂದಿದ್ದು, ಪರಿಶೀಲಿಸಿದಾಗ ಖಾಸಗಿ ಕಂಪನಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿರುವುದು ಗೊತ್ತಾಗಿದೆ. ಅನುಮಾನ ಬಂದು ಸ್ಥಿರ ದೂರವಾಣಿಗೆ ಕರೆ ಮಾಡಿದಾಗ, ‘ಎಲ್ಲ ದಾಖಲೆಗಳನ್ನು ಕೇಂದ್ರ ಸರ್ಕಾರದ ವೆಬ್​ಸೈಟ್​ಗೆ ಅಪ್​ಲೋಡ್ ಮಾಡಿ ‘ಉದ್ಯೋಗ ಆಧಾರ್’ ಪ್ರಮಾಣ ಪತ್ರ ಕೊಡಿಸುವುದಾಗಿ ತಿಳಿಸಿದ್ದಾರೆ. ಯೋಗೇಶ್, ಕೇಂದ್ರ ಸರ್ಕಾರದ ಅಧಿಕೃತ ವೆಬ್​ಸೈಟ್ ಪರಿಶೀಲಿಸಿದಾಗ ನೋಂದಣಿ ಉಚಿತ ಎಂಬುದು ಗೊತ್ತಾಗಿದೆ. ಅದಕ್ಕಾಗಿ ಸರ್ಕಾರದ ವೆಬ್​ಸೈಟ್​ಗೆ ಹೋಲುವಂತೆ ನಕಲಿ ಸೈಟ್ ತೆರೆದು ವಂಚನೆ ಮಾಡುತ್ತಿರುವುದಾಗಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದಾಖಲೆಗೂ ಕನ್ನ: ಈ ದಾಖಲೆ ಬಳಸಿಕೊಂಡು ಬ್ಯಾಂಕ್​ನಿಂದ ಸಾಲ ಪಡೆದು ವಂಚಿಸಬಹುದು. ಬ್ಯಾಂಕ್ ಖಾತೆ, ಆಧಾರ್, ಪಾನ್ ವಿವರ ಬಳಸಿ ನೆಟ್​ಬ್ಯಾಂಕಿಂಗ್​ಗೆ ಕನ್ನ ಹಾಕುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ಉದ್ಯೋಗ ಆಧಾರ್?

ಹೊಸದಾಗಿ ಉದ್ಯಮ ಆರಂಭಿಸಲು ಎಂಇಎಂಎಸ್ ವೆಬ್​ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಉದ್ಯೋಗ ಆಧಾರ್ ಪ್ರಮಾಣ ಪತ್ರ ಪಡೆದರೆ ಸರ್ಕಾರದ ಸೌಲಭ್ಯ ಸಿಗಲಿದೆ. ಬ್ಯಾಂಕ್ ಸಾಲ, ವಿದ್ಯುತ್- ನೀರು ಸಂಪರ್ಕ,ನಿವೇಶನ, ಸಬ್ಸಿಡಿ, ಉತ್ಪನ್ನಗಳ ಗುಣಮಟ್ಟ ದೃಢೀಕರಣ ಸೇರಿ ಪ್ರತಿಯೊಂದು ಹಂತದಲ್ಲಿ ಈ ಪ್ರಮಾಣ ಪತ್ರ ಕಡ್ಡಾಯ.

ವಂಚನೆ ಮಾಡಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದೆ. ನಕಲಿ ವೆಬ್​ಸೈಟ್ ತೆರೆದಿದ್ದವರಿಗೆ ಕರೆ ಮಾಡಿ ತಿಳಿಸಿದಾಗ, ನನ್ನ ಹೆಸರಿನಲ್ಲಿ ಉದ್ಯೋಗ ಆಧಾರ್ ನೋಂದಣಿ ಮಾಡಿಸಿದ್ದಾರೆ.

| ಡಿ.ಯೋಗೇಶ್ ಯುವ ಉದ್ಯಮಿ