ಶಿವಮೊಗ್ಗ: ಶಿವಮೊಗ್ಗ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿತು. ಮಳೆ ಆರ್ಭಟದ ನಡುವೆಯೂ ನಾಲ್ಕು ದಿನಗಳ ಮೇಳವನ್ನು ಲಕ್ಷಾಂತರ ಜನ ಕಣ್ತುಂಬಿಕೊಂಡರು.
ಹೈಟೆಕ್ ಮೀನುಗಾರಿಕೆ, ಯಂತ್ರೋಪಕರಣಗಳು, ಪಶು ಸಂಗೋಪನೆ, ಆಹಾರ ಮತ್ತು ನರ್ಸರಿ ವಿಭಾಗಗಳು, ತಂತ್ರಜ್ಞಾನ ಪಾರ್ಕ್, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಹೈಟೆಕ್ ತೋಟಗಾರಿಕೆ, ಹೈಡ್ರೋಫೋನಿಕ್ ಕೃಷಿ, ಪುಷ್ಪ ಕೃಷಿ, ಜೇನು ಸಾಕಣೆ, ಕೀಟ ಪ್ರಪಂಚ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯ, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಅಡಕೆ ಬೆಳೆಯ ಸಮಗ್ರ ಕೃಷಿ ಪದ್ಧತಿ, ಬಗೆ ಬಗೆಯ ತಿನಿಸುಗಳು ಹೀಗೆ ವೈವಿಧ್ಯಮಯ ವಿಷಯಗಳ ಮಾಹಿತಿ ಅನಾವರಣಕ್ಕೆ ಮೇಳ ಸಾಕ್ಷಿಯಾಯಿತು.
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವ್ಯಾಪ್ತಿಗೆ ಸಂಬಂಧಿಸಿದ ಮೇಳದಲ್ಲಿ ಮಳೆ ಆರ್ಭಟವನ್ನು ಲೆಕ್ಕಿಸದೆ ಲಕ್ಷಾಂತರ ಜನರು ಭೇಟಿ ಕೊಟ್ಟಿದ್ದು ವಿಶೇಷವಾಗಿತ್ತು. ಅದರಲ್ಲೂ ವಾರಾಂತ್ಯ ಭಾನುವಾರ ಒಂದೇ ದಿನ 50 ಸಾವಿರಕ್ಕೂ ಅಧಿಕ ಜನರು ಮೇಳಕ್ಕೆ ಬಂದು ಉಪಯುಕ್ತ ಮಾಹಿತಿ ಪಡೆದರು. ಒಟ್ಟು 4 ದಿನಗಳ ಕೃಷಿ ಮೇಳಕ್ಕೆ 1.20 ಲಕ್ಷ ಜನ ಭೇಟಿ ನೀಡಿದ್ದಾರೆ.
ಅಡಕೆ ಸಂಶೋಧನಾ ಮಳಿಗೆ ಪ್ರಥಮ
ಸಂಶೋಧನಾ ವಿಭಾಗದಲ್ಲಿ ಅಡಕೆ ಸಂಶೋಧನಾ ಮಳಿಗೆಗೆ ಪ್ರಥಮ ಸ್ಥಾನ, ಸಾವಯವ ಕೃಷಿ ಮಳಿಗೆಗೆ ದ್ವಿತೀಯ ಸ್ಥಾನ ದೊರೆಯಿತು. ಕಲಿಕೆಯಲ್ಲಿ ಕೀಟಪ್ರಪಂಚ ಮಳಿಗೆ ಪ್ರಥಮ, ಮೂಡಿಗೆರೆ ಕಾಲೇಜು ದ್ವಿತೀಯ ಹಾಗೂ ವಿಸ್ತರಣೆಯಲ್ಲಿ ಶಿವಮೊಗ್ಗ ಕೆವಿಕೆ ಪ್ರಥಮ, ಹಿರಿಯೂರು ಕೆವಿಕೆ ದ್ವಿತೀಯ ಸ್ಥಾನ ಪಡೆದುಕೊಂಡಿತು.