ನವದೆಹಲಿ: ಭಾರತ ಮಹಾ ಮರುವಲಸೆಗೆ ಸಜ್ಜಾಗಿದೆ. ಅಂದರೆ, ಕರೊನಾನದಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆತರಲು ಸಿದ್ಧತೆ ಮಾಡಿಕೊಂಡಿದ್ದು, ಮೇ 7ರಿಂದ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ.
ವಿದೇಶಗಳಲ್ಲಿರುವ 2 ಲಕ್ಷಕ್ಕೂ ಅಧಿಕ ಭಾರತೀಯರು ತಾಯ್ನಾಡಿಗೆ ಬರಲು ಉತ್ಸುಕರಾಗಿದ್ದಾರೆ. ಮೇ 7ರಿಂದ ವಿಶೇಷ ವಿಮಾನಗಳ ಮೂಲಕ ಇವರನ್ನು ಕರೆತರಲಾಗುವುದು. ಆರಂಭದ ಒಂದು ವಾರದಲ್ಲಿ 14,800 ಜನರನ್ನು ಕರೆತರಲಾಗುವುದು ಎಂದು ನಾಗರಿಕ ವಿಮಾನ ಯಾನ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಇದೊಂದು ವಿಶೇಷ ಕಾರ್ಯಾಚರಣೆಯಾಗಿದ್ದು, ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಇಚ್ಛಿಸುವವರು ವಿಮಾನ ಪ್ರಯಾಣದ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ; ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!
ಲಂಡನ್ನಿಂದ ದೆಹಲಿ, ಮುಂಬೈ, ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ದರವನ್ನು 50,000 ರೂ. ಎಂದು ನಿಗದಿ ಪಡಿಸಲಾಗಿದೆ. ಇನ್ನು ಚಿಕಾಗೋ, ನೇವಾರ್ಕ್, ಸ್ಯಾನ್ಫ್ರಾನ್ಸಿಸ್ಕೋ ಮೊದಲಾ ಕಡೆಗಳಿಂದ ಬರುವವರು ಒಂದು ಲಕ್ಷ ರೂ. ಪಾವತಿಸುವುದು ಅನಿವಾರ್ಯವಾಗಲಿದೆ. ವಿವಿಧ ದೇಶಗಳಿಂದ ಬರುವವರಿಗೆ ನಿಗದಿಪಡಿಸಿದ ಟಿಕೆಟ್ ದರವನ್ನು ವಿಮಾನಯಾನ ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ದುಬೈ-13,000 ರೂ, ಅಬುದಾಭಿ-15,000 ರೂ. ಹಾಗೂ ಸಿಂಗಾಪುರ್ನಿಂದ ಬೆಂಗಳೂರಿಗೆ ಬರಲು 18,000 ರೂ. ಟಿಕೆಟ್ ದರವಿದೆ.
ಇದಲ್ಲದೇ, ಭಾರತದಲ್ಲಿ ನೆಲೆಸಿರುವ ವಿದೇಶಿಯರನ್ನು ಅವರವರ ದೇಶಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.