ನ್ಯೂಸ್

ರೇಪ್ ಕೇಸ್ ತನಿಖೆಗೆ ಎರಡು ತಿಂಗಳ ಗಡುವು: ಎಫ್​ಐಆರ್ ದಾಖಲಿಸಲು ಠಾಣೆ ಪರಿಮಿತಿ ಇಲ್ಲ

ಬೆಂಗಳೂರು: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಉತ್ತರಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ಬೆನ್ನಲ್ಲಿ ಮಹಿಳಾ ಸುರಕ್ಷತೆಗೆ ಒತ್ತು ನೀಡಿರುವ ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಹಿಳೆಯರ ವಿರುದ್ಧದ ದೌರ್ಜನ್ಯ ಅಥವಾ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಠಾಣಾ ಸರಹದ್ದಿನ ಪರಿಮಿತಿ ಇಲ್ಲದೆ ಎಫ್​ಐಆರ್ ದಾಖಲಿಸಿಕೊಳ್ಳುವ ಜತೆಗೆ 2 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂಬ ಹೊಸ ನಿಯಮ ಸೇರಿಸಿದೆ.

ಮಹಿಳೆಯರು ಮತ್ತು ಯುವತಿಯರ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್​ಗಳ ನಿರ್ವಹಣೆಯಲ್ಲಿ ಕಾನೂನು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳಿಗೂ ಸಲಹೆ ಕೊಡಲಾಗಿದೆ. ಎಫ್​ಐಆರ್ ದಾಖಲು, ಸಾಕ್ಷ್ಯ ಸಂಗ್ರಹ, ಪುನರಾವರ್ತಿತ ಆರೋಪಿಗಳ ಮೇಲೆ ನಿಗಾ ವಹಿಸುವಿಕೆ ಸೇರಿ ಹಲವು ವಿಚಾರ ಕೇಂದ್ರೀಕರಿಸಿ ಮಾರ್ಗಸೂಚಿ ಪ್ರಕಟಿಸಿದೆ.

ಮಾರ್ಗಸೂಚಿಯಲ್ಲೇನಿದೆ? *ಸಂಜ್ಞೇಯ ಅಪರಾಧ (ಕಾಗ್ನಿಜಬೆಲ್ ಅಫೆನ್ಸ್)ವಾದರೂ ಸಿಆರ್​ಪಿಸಿ 1973 ಸೆಕ್ಷನ್ 154, ಉಪ ಸೆಕ್ಷನ್ (1) ಅನ್ವಯ ಎಫ್​ಐಆರ್ ದಾಖಲಿಸಬೇಕು *ದೌರ್ಜನ್ಯ ನಡೆದಿರುವ ಸ್ಥಳ ಠಾಣಾ ಸರಹದ್ದಿನ ವ್ಯಾಪ್ತಿಯಿಂದ ಹೊರಗಿದ್ದರೂ ವಿಳಂಬ ಮಾಡದೆ ಎಫ್​ಐಆರ್ ದಾಖಲಿಸಬೇಕು *ಎಫ್​ಐಆರ್ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿ ವಿರುದ್ಧ ಭಾರತೀಯ ದಂಡಸಂಹಿತೆ 1860 ಸೆಕ್ಷನ್ 166 ಎ(ಸಿ) ಪ್ರಕಾರ ಕಾನೂನು ಕ್ರಮ ಕೈಗೊಳ್ಳಬಹುದು *ಎಫ್​ಐಆರ್ ದಾಖಲಿಸಿದ 2 ತಿಂಗಳಲ್ಲಿ ತನಿಖೆ ಮುಕ್ತಾಯಗೊಳಿಸಬೇಕು *ಕೇಂದ್ರ ಸರ್ಕಾರದ ಆನ್​ಲೈನ್ ಪೋರ್ಟಲ್, ಇನ್ವೆಸ್ಟಿಗೇಷನ್ ಟ್ರಾ್ಯಕಿಂಗ್ ಸಿಸ್ಟಂ ಫಾರ್ ಸೆಕ್ಸುವಲ್ ಅಫೆನ್ಸಸ್ (ಐಟಿಎಸ್​ಎಸ್​ಒ) ಮೂಲಕ ತನಿಖಾ ಪ್ರಗತಿ ಕುರಿತು ರಾಜ್ಯ ಪೊಲೀಸ್ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು *ಅತ್ಯಾಚಾರವಾಗಿರುವ ಕುರಿತು ಮಾಹಿತಿ ಸ್ವೀಕರಿಸಿದ 24 ಗಂಟೆಯೊಳಗೆ ನೋಂದಾಯಿತ ವೈದ್ಯಾಧಿಕಾರಿ ಬಳಿ ಸಂತ್ರಸ್ತೆಯನ್ನು ತಪಾಸಣೆಗೊಳಪಡಿಸಬೇಕು

ಸಂತ್ರಸ್ತೆ ಹೇಳಿಕೆ ಪ್ರಮುಖ ಸಾಯುವ ಮುನ್ನ ಸಂತ್ರಸ್ತೆ ನೀಡುವ ಬರವಣಿಗೆ ಮೂಲಕದ ಅಥವಾ ಬಾಯಿಮಾತಿನ ಹೇಳಿಕೆಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಬೇಕು. ಘಟನೆ ಕುರಿತು ಸಂತ್ರಸ್ತೆ ನೀಡುವ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಅಥವಾ ತನಿಖಾಧಿಕಾರಿಗಳು ಖುದ್ದಾಗಿ ದಾಖಲಿಸಿಕೊಂಡು ಸಹಿ ಪಡೆದುಕೊಳ್ಳಬೇಕು. ಆದರೆ, ಸಂತ್ರಸ್ತರು ಸಾಯುವ ಸ್ಥಿತಿಯಲ್ಲಿದ್ದಾಗ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ ಹೇಳಿಕೆಯನ್ನೇ ರೆಕಾರ್ಡ್ ಮಾಡಿಕೊಂಡು ಸಾಕ್ಷ್ಯವನ್ನಾಗಿಸಬೇಕು. ಈ ಕುರಿತು ನ್ಯಾಯಾಲಯದ ಗಮನಕ್ಕೆ ತಂದು, ಸಾಕ್ಷ್ಯವನ್ನಾಗಿ ಪರಿಗಣಿಸುವಂತೆ ಮನವರಿಕೆ ಮಾಡಬೇಕು.

ಸಾಕ್ಷ್ಯ ಸಂಗ್ರಹಕ್ಕೆ ಎಸ್​ಎಇಸಿ ಕಿಟ್

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷ್ಯ ಸಂಗ್ರಹ, ಸಂರಕ್ಷಣೆ ಹಾಗೂ ಸರಬರಾಜು ಸಂಬಂಧ ವಿಧಿ ವಿಜ್ಞಾನ ಸೇವೆಗಳ ನಿರ್ದೇಶನಾಲಯ (ಡಿಎಫ್​ಎಸ್​ಎಸ್) ರೂಪಿಸಿರುವ ನಿಯಮ ಪಾಲಿಸಬೇಕು. ಜತೆಗೆ ಎಲ್ಲ ರಾಜ್ಯ ಪೊಲೀಸರಿಗೆ ವಿತರಿಸಿರುವ ಸೆಕ್ಸುವಲ್ ಅಸಾಲ್ಟ್ ಎವಿಡೆನ್ಸ್ ಕಲೆಕ್ಷನ್ (ಎಸ್​ಎಇಸಿ) ಕಿಟ್​ಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಸೂಚಿಸಿದೆ.

ಸಾಕ್ಷ್ಯ ಬಲಪಡಿಸಲು ಸಲಹೆ

ಅತ್ಯಾಚಾರ ಪ್ರಕರಣಗಳಲ್ಲಿ ತೀವ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಲಾಗುತ್ತದೆ. ಆದರೆ, ನ್ಯಾಯಾಲಯದ ವಿಚಾರಣೆ ವೇಳೆ ಆರೋಪಿಗಳ ಕೃತ್ಯ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ. ತನಿಖಾಧಿಕಾರಿಗಳ ವೈಫಲ್ಯದಿಂದ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಹೀಗಾಗಿ ಸಾಕ್ಷ್ಯ ಬಲಪಡಿಸಬೇಕು. ದೋಷರೋಪಣಾ ಪಟ್ಟಿ ಸಿದ್ಧಪಡಿಸಿದ ಬಳಿಕ, ‘ಇನ್ವೆಸ್ಟಿಗೇಷನ್ ಟ್ರಾ್ಯಕಿಂಗ್ ಸಿಸ್ಟಮ್ ಫಾರ್ ಸೆಕ್ಸುವಲ್ ಅಫೆನ್ಸ್’ (ಐಟಿಎಸ್​ಎಸ್​ಒ) ಗಮನಕ್ಕೆ ತಂದು ಕ್ರಮಬದ್ಧವಾಗಿಯೇ ಎಂಬುದನ್ನು ತಿಳಿದುಕೊಳ್ಳಬೇಕು. ಅಗತ್ಯವಿದ್ದರೆ ಮಾರ್ಗದರ್ಶನ ಪಡೆಯಬೇಕು.