ನವದೆಹಲಿ: ಕರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಭಯದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ.
ಆದರೆ ಇನ್ನು ಮುಂದೆ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಮೇಲೆ ಕೈ ಮಾಡುವವರು ಬಚಾವ್ ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ ಕೇಂದ್ರ ಸರ್ಕಾರ ಅವರ ರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನೊಂದನ್ನು ಜಾರಿಗೊಳಿಸಿದೆ.
ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು, ಅವರತ್ತ ಉಗುಳುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಜಾಮೀನು ರಹಿತ ಅಪರಾಧ. ಅಂಥವರಿಗೆ 6ತಿಂಗಳಿನಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಘೋಷಿಸಿದ್ದಾರೆ.
ಕೊವಿಡ್-19 ವಿರುದ್ಧ ಹೋರಾಟಕ್ಕಾಗಿ ಆರೋಗ್ಯ ಕಾರ್ಯಕರ್ತರು ಹಗಲಿರುಳು, ತಮ್ಮ ಜೀವವನ್ನು ಪಣಕ್ಕಿಟ್ಟು ಶ್ರಮಿಸುತ್ತಿದ್ದಾರೆ. ಇಡೀ ದೇಶ ಅವರೆಡೆಗೆ ಕೃತಜ್ಞತಾ ಭಾವದಿಂದ ನೋಡುತ್ತಿದೆ. ಆದರೆ ಕೆಲವೇ ಕೆಲವು ಮಂದಿ ಅವರ ಮೇಲೆಯೇ ಹಲ್ಲೆ ಮಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಆರೋಗ್ಯ ಸಿಬ್ಬಂದಿ, ವೈದ್ಯರು ಮನೆ ಹೊರಗೆ ಬರಲಾಗುತ್ತಿಲ್ಲ. ಅವರನ್ನು ವೈರಸ್ ಹರಡಲು ಬಂದವರಂತೆ ಬಿಂಬಿಸಿ, ಹಲ್ಲೆ ಮಾಡಲಾಗುತ್ತಿದೆ. ಇಂಥ ದುಷ್ಕೃತ್ಯವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಪ್ರಕಾಶ್ ಜಾವಡೇಕರ್ ಎಚ್ಚರಿಕೆ ನೀಡಿದ್ದಾರೆ.
120 ವರ್ಷಗಳ ಹಿಂದಿನ ಸಾಂಕ್ರಾಮಿಕ ಕಾಯಿಲೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಅದರ ಅನ್ವಯ ವೈದ್ಯರು, ನರ್ಸ್ಗಳು, ಆರೋಗ್ಯ ಕಾರ್ಯಕರ್ತರು, ಆಶಾಕಾರ್ಯಕರ್ತರ ಮೇಲೆ ಯಾರೇ, ಎಲ್ಲೇ ಹಲ್ಲೆ ನಡೆಸಿದರೂ ಅವರಿಗೆ 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂ.ವರೆಗೆ ದಂಡವನ್ನೂ ವಿಧಿಸಬಹುದು. ಏಳು ವರ್ಷಗಳವರೆಗೆ ಜೈಲು ಶಿಕ್ಷೆಗೂ ಗುರಿಯಾಗಿಸಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಹಾಗೇ ಆರೋಗ್ಯ ಕಾರ್ಯಕರ್ತರಿಗೆ ನೀಡಲಾದ ವಿಮಾ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದಿದ್ದಾರೆ. ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಅನುಮೋದನೆ ಕೊಡುವುದು ಬಾಕಿ ಇದೆ. (ಏಜೆನ್ಸೀಸ್)