ನ್ಯೂಸ್

ಕೇರಳದಲ್ಲಿ ನಿಫಾಗೆ ಓರ್ವ ಬಲಿ; ಸೋಂಕು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿ ಅನುಸರಿಸುವಂತೆ ಕೇಂದ್ರ ಸೂಚನೆ

ತಿರುವನಂತಪುರಂ: ಕೇರಳದ ಕೋಝಿಕ್ಕೋಡ್‌ನಲ್ಲಿ ನಿಫಾ ವೈರಸ್​​ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಭಾನುವಾರ (ಜುಲೈ 21) ಮೃತಪಟ್ಟಿರುವುದಾಗಿ ರಾಜ್ಯ ಸರ್ಕಾರ ದೃಢಪಡಿಸಿದೆ. ಈ ವರ್ಷ ಕೇರಳದಲ್ಲಿ ನಿಫಾ ವೈರಸ್​​ಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ. ಬಾಲಕನ ಸಾವಿನ ನಂತರ ಈ ಸೋಂಕು ಹರಡುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಸಕ್ರಿಯ ಪ್ರಕರಣಗಳ ಹುಡುಕಾಟ ಮತ್ತು ಸಂಪರ್ಕ ಪತ್ತೆಹಚ್ಚುವಿಕೆ ಸೇರಿದಂತೆ ನಾಲ್ಕು ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಜಾರಿಗೆ ತರಲು ಕೇಂದ್ರ ಆರೋಗ್ಯ ಸಚಿವಾಲಯವು ಕೇರಳ ಸರ್ಕಾರಕ್ಕೆ ಸೂಚಿಸಿದೆ. ಮೊದಲನೆಯದಾಗಿ ನಿಫಾ ವೈರಸ್​ ಸೋಂಕಿನ ಹೆಚ್ಚುವರಿ ಪ್ರಕರಣಗಳನ್ನು ಗುರುತಿಸಲು ದೃಢಪಡಿಸಿದ ಪ್ರಕರಣದ ಕುಟುಂಬ, ನೆರೆಹೊರೆ ಮತ್ತು ಒಂದೇ ರೀತಿಯ ಸ್ಥಳಾಕೃತಿ ಹೊಂದಿರುವ ಇತರ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣದ ಹುಡುಕಾಟಗಳನ್ನು ನಡೆಸಲು ಸಲಹೆ ನೀಡಿದೆ.

ನಿಫಾ ವೈರಸ್​​​ ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಕಳೆದ 12 ದಿನಗಳಲ್ಲಿ ಗುರುತಿಸಲಾದ ಪ್ರಕರಣದ ಸಕ್ರಿಯ ಸಂಪರ್ಕಗಳನ್ನು ಪತ್ತೆಹಚ್ಚಬೇಕು. ದೃಢಪಡಿಸಿದ ಪ್ರಕರಣದ ಸಂಪರ್ಕಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಮತ್ತು ರೋಗಲಕ್ಷಣಗಳನ್ನು ತೋರಿಸುವ ಯಾವುದೇ ಶಂಕಿತರನ್ನು ಪ್ರತ್ಯೇಕಿಸಬೇಕು. ಹಾಗೂ ಆರಂಭಿಕ ಪತ್ತೆ ಮತ್ತು ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸಂಭಾವ್ಯ ಸಂಪರ್ಕಗಳು ಮತ್ತು ಶಂಕಿತರಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸುವಂತೆ ಕೇಂದ್ರ ಸಚಿವಾಲಯವು ಕೇರಳ ಸರ್ಕಾರಕ್ಕೆ ಸೂಚಿಸಿದೆ.

ತಜ್ಞರ ಪ್ರಕಾರ ನಿಫಾ ವೈರಸ್ ಪ್ರಾಣಿಗಳ ಮೂಲಕ ಮಾತ್ರವಲ್ಲದೆ ಒಬ್ಬ ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆ. WHO ಪ್ರಕಾರ, ನಿಫಾ ವೈರಸ್ ಸೋಂಕಿತ ರೋಗಿಗಳು ತಲೆನೋವು, ವಾಂತಿ, ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆಯೊಂದಿಗೆ ವೈರಲ್ ಜ್ವರದಂತಹ ಲಕ್ಷಣಗಳನ್ನು ತೋರಿಸುತ್ತಾರೆ. ಈ ರೋಗಲಕ್ಷಣಗಳು 1-2 ವಾರಗಳವರೆಗೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದೆ. (ಏಜೆನ್ಸೀಸ್​​)