ಸೊರಬ: ಸಂಸದರ ನಿಧಿಯಿಂದಲೇ ಕೇಂದ್ರ ಸರ್ಕಾರದ ವಿಶೇಷ ಅನುದಾನ ತಂದು ತಾಲೂಕಿನ ದಂಡಾವತಿ ನೀರಾವರಿ ಯೋಜನೆ ಮಾಡಿಯೇ ತೀರುತ್ತೇವೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕಳೆದ ಐದು ವರ್ಷದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿದ್ದಾರೆ. ನನ್ನ ಅವಧಿಯಲ್ಲೂ ಅನೇಕ ಕಾಮಗಾರಿಗಳು ನಡೆದಿವೆ. ಇನ್ನೂ ಹಲವು ಪ್ರಗತಿಯಲ್ಲಿವೆ. ಸ್ಥಳೀಯ ಶಾಸಕರು ದ್ವೇಷದ ರಾಜಕಾರಣದಿಂದ ಅವುಗಳನ್ನು ಪೂರ್ಣಗೊಳಿಸಿಲ್ಲ ಎಂದರೆ ಸಂಸದರ ಅನುದಾನದಿಂದ ಮುಗಿಸುತ್ತವೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಜತೆಗೆ ರಸ್ತೆ, ನೀರಾವರಿ, ಆರೋಗ್ಯಕ್ಕೆ ಸಂಬಂಧಿಸಿದಂತೆ, ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡೋಣ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ದಂಡವತಿ ನೀರಾವರಿ ಯೋಜನೆ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಸಂಸದರ ಸಹಕಾರದಿಂದ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ದೇಶದ ಹಿತದೃಷ್ಟಿಯಿಂದ ನಾವೆಲ್ಲರೂ ಒಂದೇ ಎನ್ನುವ ಭಾವನೆ ಬಂದಾಗ ಮಾತ್ರ ಇಂತಹ ಫಲಿತಾಂಶವನ್ನು ಚುನಾವಣೆಯಲ್ಲಿ ಕಾಣಲು ಸಾಧ್ಯ. ಚುನಾವಣೆ ಸಂದರ್ಭ ಜಾತಿ ಹಿಂದೆ ಮತದಾರ ಓಡಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಸಭೆ, ಸಮಾರಂಭಗಳನ್ನು ಕಡಿತಗೊಳಿಸಿ ಜನರ ಬಳಿ ತೆರಳಿ ಕಷ್ಟ-ಸುಖ ಆಲಿಸಿದರೆ ಮುಂದೆ ನಮಗೆ ರಾಜಕೀಯವಾಗಿ ಯಶಸ್ಸು ಸಿಗಲಿದೆ ಎಂದರು.
ಚುನಾವಣೆಯಲ್ಲಿ ಎಸ್.ಬಂಗಾರಪ್ಪ ಹಾಗೂ ಮೇರುನಟ ಡಾ. ರಾಜಕುಮಾರ್ ಹೆಸರು ಬಳಸಿಕೊಂಡು ಅಪಮಾನ ಮಾಡಿರುವ ಸಚಿವರಿಗೆ ತಮ್ಮ ಸ್ಥಾನದ ಗೌರವ ತಿಳಿದಿಲ್ಲ. ಕನ್ನಡ ಸರಿಯಾಗಿ ಓದಲು, ಬರೆಯಲು ಬಾರದ ಇಂಥವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿರುವುದು ಕನ್ನಡಕ್ಕೆ ಮಾಡಿದ ಅಪಮಾನ. ತಕ್ಷಣವೇ ಅವರನ್ನು ಸಚಿವ ಸ್ಥಾನದಿಂದ ವಜಗೊಳಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಪ್ರಕಾಶ್, ಕೊಟ್ರೇಶ್, ಗುರುಕುಮಾರ ಪಾಟೀಲ್, ಅಮಿತ್ ಗೌಡ, ವಿನಾಯಕ, ಅಶೋಕ ಶೇಟ್, ಪ್ರಭಾವತಿ, ಆಶೀಕ್ ನಾಗಪ್ಪ, ಲಲಿತಾ ನಾರಾಯಣ, ಸುಧಾ ಕುಬಸದ್, ಜಾನಕಪ್ಪ, ಕೃಷ್ಣಮೂರ್ತಿ, ನಿಂಗಪ್ಪ ಇತರರಿದ್ದರು.