ಬೆಂಗಳೂರು : ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ಪ್ರದೇಶದ ಪಬ್‌ಗಳ ಮೇಲೆ ನಗರದ ಕೇಂದ್ರ ವಿಭಾಗ ಪೊಲೀಸರು ಶುಕ್ರವಾರ ರಾತ್ರಿ ದಾಳಿ ಮಾಡಿದ್ದು, ವಿವಿಧ ನಿಯಮಗಳು ಉಲ್ಲಂಘನೆಗಳಿಗಾಗಿ ೨೦ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿ ಮಧ್ಯರಾತ್ರಿ ೧ ಗಂಟೆಯ ನಂತರ ವಾಣಿಜ್ಯ ಸಂಸ್ಥೆಗಳನ್ನು ತೆರೆದಿರುವವರ ವಿರುದ್ಧ ಕೆಪಿ ಕಾಯ್ದೆಯಡಿ ೧೩ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಕ್ರಮ ಕಳ್ಳಸಾಗಾಣಿಕೆ ಕಾಯ್ದೆಯಡಿ ಹೋಟೆಲ್ ಮ್ಯಾನೇಜರ್ ವಿರುದ್ಧ ೨ ಪ್ರಕರಣ ದಾಖಲು ಮಾಡಲಾಗಿದ್ದು, ಕಾರ್ಯಾಚರಣೆಯಲ್ಲಿ ಓರ್ವ ವಿದೇಶಿ ಮಹಿಳೆಯ ರಕ್ಷಣೆ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ನೀಡಿದವರ ವಿರುದ್ಧ ೨೯೧ ಐಪಿಸಿ ಅಡಿಯಲ್ಲಿ ಒಟ್ಟು ೫ ಪ್ರಕರಣ ದಾಖಲಾಗಿದ್ದು, ಇದರಲ್ಲಿ ತೃತೀಯ ಲಿಂಗಿಗಳ ವಿರುದ್ಧ ಒಂದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅನೈತಿಕ ಚಟುವಟಿಕೆ ನಡೆಸುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಏಕಕಾಲದಲ್ಲಿ ದಾಳಿ ಮಾಡಿ ೨೫ ವಿದೇಶಿಗರನ್ನು ವಶಕ್ಕೆ ಪಡೆಯಲಾಗಿತ್ತು.