ನ್ಯೂಸ್

ಸೇವಾ ವಲಯದ ಉದ್ಯಮಗಳ ಸಮೀಕ್ಷೆಗೆ ಮುಂದಾದ ಕೇಂದ್ರ ಸರ್ಕಾರ: ಇದರಿಮದಾಗುವ ಲಾಭಗಳೇನು?

ಬೆಂಗಳೂರು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆಧಾರದಲ್ಲಿ ಕೇಂದ್ರ ಸರ್ಕಾರವು ಸೇವಾ ವಲಯಗಳಿಗೆ ಯೋಜನೆಗಳನ್ನು ರೂಪಿಸುವುದಕ್ಕಾಗಿ ದತ್ತಾಂಶ ಸಂಗ್ರಹಿಸುವ ‘ಸೇವಾ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ ಹಂತ-1’ಕ್ಕೆ (ಎಎಸ್‌ಎಸ್‌ಎಸ್‌ಇ) ತರಬೇತಿ ಸಿಬ್ಬಂದಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಗುರುವಾರ ಕೋರಮಂಗಲದ ಸೇವಾ ಸದನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ ಸಿದ್ಧಾರ್ಥ ಕುಂದು ಚಾಲನೆ ನೀಡಿದರು.

ದೇಶದ ದಕ್ಷಿಣ ಮತ್ತು ಪಶ್ವಿಮ ವಲಯದಲ್ಲಿ ಮೊದಲ ಹಂತದಲ್ಲಿ ಸಮೀಕ್ಷೆ ನಡೆಸುವ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಮುಂದಿನ ಏಪ್ರಿಲ್‌ನಿಂದ ಜೂನ್‌ವರೆಗೆ ಸಮೀಕ್ಷೆಯು ನಡೆಯಲಿದೆ.

ಚಾಲನೆ ನೀಡಿದ ಬಳಿಕ ಮಾತನಾಡಿದ ಸಿದ್ಧಾರ್ಥ ಕುಂದು, ಸೇವಾ ವಲಯದ ಸಮೀಕ್ಷೆಯನ್ನು ನಡೆಸಲು ರಂಗರಾಜನ್ ಸಮಿತಿಯು ಶಿಾರಸು ಮಾಡಿದೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಕಾಯ್ದೆ-2007ರ ಅಡಿಯಲ್ಲಿ ಸ್ಥಾಪಿಸಲಾದ ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್ (ಸಿಎಸ್‌ಟಿಎನ್) ಬಳಸಿಕೊಂಡು ಸಮೀಕ್ಷೆ ನಡೆಸಲು ಪ್ರಧಾನ ಮಂತ್ರಿ ಕಚೇರಿಯು ಸಲಹೆ ನೀಡಿದೆ ಅದರಂತೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಸೇವಾ ವಲಯದ ಕೊಡುಗೆಯು ಮಹತ್ವದ ಪಾತ್ರ ವಹಿಸಿದೆ. ಆದ್ದರಿಂದ ಸೇವಾ ವಲಯದ ಸಂಘಟಿತ ಭಾಗಕ್ಕೆ ಕೇಂದ್ರ ಸರ್ಕಾರವು ಯೋಜನೆ ರೂಪಿಸಲು ಈ ಸಮೀಕ್ಷೆಯು ಮುಖ್ಯವಾಗಲಿದೆ ಎಂದರು.

ಸಚಿವಾಲಯದ (ಕ್ಷೇತ್ರ ಕಾರ್ಯಾಚರಣೆ ವಿಭಾಗ) ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪ ಮಹಾ ನಿರ್ದೇಶಕ ಆರ್. ಮನೋಹರ್ ಮಾತನಾಡಿ, ಕಾರ್ಪೋರೇಟ್ ಸೇವಾ ವಲಯದ ಉದ್ಯಮಗಳ ಯಾವುದೇ ಸಮಗ್ರ ದತ್ತಾಂಶವನ್ನು ಹೊಂದಿಲ್ಲ. ಈ ಕಾರಣದಿಂದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವ ಸೇವಾ ವಲಯದ ಎಲ್ಲ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳಲು ಅಡ್ಡಿಯಾಗಿದೆ. ರಾಷ್ಟ್ರದ ನೀತಿ ನಿರೂಪಣೆಯಲ್ಲಿ ದತ್ತಾಂಶವು ಪ್ರಮುಖ ಪಾತ್ರ ವಹಿಸಲಿದೆ. ಸೇವಾ ವಲಯಕ್ಕೆ ಗುಣಮಟ್ಟದ ಯೋಜನೆಗಳನ್ನು ರೂಪಿಸಲು ಈ ಸಮೀಕ್ಷೆಯು ಸಹಕಾರಿಯಾಗಲಿದೆ ಎಂದು ಹೇಳಿದರು.

ತರಬೇತಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಪ್ರತಿನಿಧಿಗಳು ಭಾಗವಹಿಸಿದ್ದರು. ವಡೋದರಾ ಪ್ರಾದೇಶಿಕ ಕಚೇರಿ ನಿರ್ದೇಶಕ ಶಕ್ತಿ ಸಿಂಗ್ ಉಪಸ್ಥಿತರಿದ್ದರು.