ನ್ಯೂಸ್

PMGKAY​ ಯೋಜನೆಯಡಿ ಬಡವರಿಗೆ ಮೇ ಮತ್ತು ಜೂನ್​ನಲ್ಲಿ 5 ಕೇ.ಜಿ ಉಚಿತ ಪಡೀತರ

ನವದೆಹಲಿ: ಪ್ರಸ್ತುತ ಕೋವಿಡ್ ಎರಡನೇ ಅಲೆಯಿಂದ ದೇಶದಲ್ಲಿ ಮತ್ತೆ ಬಿಕ್ಕಟ್ಟು ಉಂಟಾಗಿದೆ. ಇದರಿಂದ ಬಡವರು, ನಿರ್ಗತಿಕರು, ಕಾರ್ಮಿಕರು, ದಿನಗೂಲಿಗಳು ತೊಂದರೆಗೆ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಇವರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ.

ಮೇ ಮತ್ತು ಜೂನ್​ ಎರಡು ತಿಂಗಳು ದೇಶದಲ್ಲಿ ಬಡವರಿಗೆ 5 ಕೆಜಿ ಉಚಿತ ಪಡೀತರ ನೀಡುವ ನಿರ್ಧಾರವನ್ನು (ಪ್ರತಿ ತಿಂಗಳು ಪ್ರತಿ ಒಂದು ಬಿಪಿಎಲ್​ ಕಾರ್ಡ್​​ಗೆ ಐದು ಕೆಜಿ ಅಕ್ಕಿ ಅಥವಾ ಗೋದಿ) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಕಟಿಸಿದ್ದಾರೆ. ಇದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ (PMGKAY) ಭಾಗವಾಗಿ ಜಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇಂದು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ನಂತರ ಮೋದಿ ಅವರು ಈ ಘೋಷಣೆ ಮಾಡಿದರು.

ಈ ನಿರ್ಧಾರದಿಂದ ಸುಮಾರು 80 ಕೋಟಿ ಜನಕ್ಕೆ ಅನುಕೂಲ ಆಗಲಿದ್ದು, 20 ಸಾವಿರ ಕೋಟಿ ರೂ ಕೇಂದ್ರಕ್ಕೆ ಹೊರೆಯಾಗಲಿದೆ. ಕಳೆದ ವರ್ಷ ಲಾಕ್​ಡೌನ್​ ಘೋಷಿಸಿದ ಮೇಲೆ ಅನೇಕ ಬಡವರು, ಕಾರ್ಮಿಕರು ತೊಂದರೆಗೆ ಸಿಲುಕಿದ್ದರಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಮೇ ಜೂನ್​​ನಲ್ಲಿ ಪ್ರತಿ ತಿಂಗಳು 5 ಕೆಜಿ ಪಡೀತರ ನೀಡಲಾಗಿತ್ತು. ನಂತರ ನವೆಂಬರ್​ವರೆಗೆ ಮುಂದುವರೆಸಲಾಗಿತ್ತು.

ಕಳೆದ ವರ್ಷ 7 ತಿಂಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಂಗವಾಗಿ ದೇಶದಲ್ಲಿ 200 ಲಕ್ಷ ಟನ್ ದವಸ ಧಾನ್ಯಗಳನ್ನು ವಿತರಿಸಲಾಗಿತ್ತು.