ಮಧ್ಯಮ ವರ್ಗದ ಜನರ ದೈನಂದಿನ ಬದುಕಿಗೆ ಬಹುದೊಡ್ಡ ನಿರಾಳತೆ ತಂದುಕೊಡುತ್ತದೆ ಎಂದು ನಿರೀಕ್ಷಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸುಧಾರಣೆಗಳು ಸೋಮವಾರದಿಂದ ಜಾರಿಗೆ ಬರಲಿವೆ. ಶೇಕಡ 99ರಷ್ಟು ನಿತ್ಯೋಪಯೋಗಿ ವಸ್ತುಗಳು ಅಗ್ಗವಾಗಲಿದ್ದು, ಇದು ದೇಶದ ಜನರಿಗೆ ಕೇಂದ್ರ ಸರ್ಕಾರದ ನವರಾತ್ರಿ ಉಡುಗೊರೆ ಎಂದು ಬಣ್ಣಿಸಲಾಗುತ್ತಿದೆ. ಉದ್ಯಮ ವಲಯವಂತೂ ಇದನ್ನು ಮುಂದಿನ ತಲೆಮಾರಿನ (ನೆಕ್ಸ್ಟ್ ಜನರೇಷನ್) ಜಿಎಸ್ಟಿ ಎಂದು ಕೊಂಡಾಡಿದೆ. ಏನಿದೆ ಈ ಜಿಎಸ್ಟಿ 2.0ನಲ್ಲಿ? ಯಾವ್ಯಾವ ವಸ್ತುಗಳು ಸಸ್ತಾ ಆಗಲಿವೆ? ಇಲ್ಲಿದೆ ವಿವರ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಜಿಎಸ್ಟಿ 2.0’ ಸುಧಾರಣಾ ಕ್ರಮಗಳ ಅನುಷ್ಠಾನಕ್ಕೆ ವೇದಿಕೆ ಸಿದ್ಧವಾಗಿದೆ. ಸೋಮವಾರ ಸೆ. 22ರಿಂದ ದೇಶಾದ್ಯಂತ ಇದು ಜಾರಿಗೆ ಬರಲಿದೆ. ನಾಲ್ಕು ಸ್ಲ್ಯಾಬ್ಗಳಿರುವ ಜಿಎಸ್ಟಿ, ಎರಡು ಸ್ಲ್ಯಾಬ್ಗಳಿಗೆ ಇಳಿಕೆಯಾಗಲಿದೆ. ಈ ಮೊದಲು ಶೇ. 5, ಶೇ. 12, ಶೇ. 18 ಮತ್ತು ಶೇ. 28 ಹೀಗೆ 4 ಸ್ಲ್ಯಾಬ್ಗಳಿದ್ದವು. ರಾಜ್ಯಗಳ ಹಣಕಾಸು ಸಚಿವರ ಜತೆಗಿನ ಸುದೀರ್ಘ ಸಮಾಲೋಚನೆ ಬಳಿಕ ಕಳೆದ ಸೆ. 3ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಸ್ಲ್ಯಾಬ್ಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸಲು ನಿರ್ಧರಿಸಲಾಯಿತು. ಅಂದರೆ ಸೋಮವಾರದಿಂದ ಶೇ. 5 ಮತ್ತು ಶೇ. 18 ಈ ಎರಡೇ ಸ್ಲ್ಯಾಬ್ಗಳಿರುತ್ತವೆ. ಶೇ. 12ರ ತೆರಿಗೆ ವ್ಯಾಪ್ತಿಯಲ್ಲಿದ್ದ ವಸ್ತುಗಳನ್ನು ಶೇ. 5ರ ತೆರಿಗೆ ವ್ಯಾಪ್ತಿಗೆ ವರ್ಗಾಯಿಸಲಾಗಿದೆ. ಶೇ. 28ರ ತೆರಿಗೆ ವ್ಯಾಪ್ತಿಯಲ್ಲಿದ್ದ ವಸ್ತುಗಳನ್ನು ಶೇ. 18ರ ತೆರಿಗೆ ವ್ಯಾಪ್ತಿಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಈ ತೆರಿಗೆ ಬ್ರ್ಯಾಕೆಟ್ನಲ್ಲಿದ್ದ ಶೇ. 99ರಷ್ಟು ವಸ್ತುಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.
ಇದರ ಮಧ್ಯೆ, ತಂಬಾಕು ಉತ್ಪನ್ನಗಳು, ದುಬಾರಿ ಕಾರುಗಳು ಮುಂತಾದ ಕೆಲವು ವಸ್ತುಗಳಿಗೆ ಶೇ. 40ರ ಪ್ರತ್ಯೇಕ ಸ್ಲ್ಯಾಬ್ ನಿಗದಿಪಡಿಸಲಾಗಿದೆ. ಸಾಮಾನ್ಯ ಜನರ ಬದುಕನ್ನು ಸಹನೀಯಗೊಳಿಸುವ ದಿಸೆಯಲ್ಲಿ ಇದು ಕೇಂದ್ರ ಸರ್ಕಾರದ ಬಹುದೊಡ್ಡ ಹೆಜ್ಜೆಯಾಗಿದೆ.
ಜಿಎಸ್ಟಿ ಇಳಿಕೆಯಿಂದ ಬಹುತೇಕ ಎಲ್ಲ ವಸ್ತುಗಳ ಬೆಲೆ ಇಳಿಯಲಿದ್ದು, ಇದು ದೇಶದ ಜನತೆಗೆ ಸಿಕ್ಕ ದೊಡ್ಡ ಗೆಲುವು. ಇದರಿಂದ ವ್ಯಾಪಾರಿಗಳಿಗೂ ಲಾಭವಾಗಲಿದೆ. ಅವರ ಕಾರ್ಯವಿಧಾನ ಸರಳಗೊಳಿಸಲಾಗಿದೆ. ಒಟ್ಟಾರೆ ಆರ್ಥಿಕತೆಗೆ ಇನ್ನಷ್ಟು ಬಲ ಬರಲಿದೆ. | ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ
ಹಿಂದುಸ್ತಾನ್ ಯೂನಿಲೀವರ್, ಇಮಾಮಿ, ಮದರ್ ಡೇರಿ, ಐಟಿಸಿ, ನೆಸ್ಲೆ, ಡಾಬರ್, ಲಾಓರಿಯಲ್, ಪ್ರಾಕ್ಟರ್ ಆಂಡ್ ಗ್ಯಾಂಬಲ್, ಹಿಮಾಲಯ ಸೇರಿದಂತೆ ಬಹುತೇಕ ಎಲ್ಲ ಕಂಪನಿಗಳೂ ತಮ್ಮ ಉತ್ಪನ್ನಗಳ ಬೆಲೆಯನ್ನು ಇಳಿಸಿವೆ. ಕಂಪನಿ, ಉತ್ಪನ್ನ, ಹೊಸ ಬೆಲೆ ಅಥವಾ ಉಳಿತಾಯ ಇಂತಿದೆ.
ಪ್ರಾಕ್ಟರ್ ಆಂಡ್ ಗ್ಯಾಂಬಲ್ ಉತ್ಪನ್ನಗಳು: ಹೆಡ್ ಆಂಡ್ ಶೌಲ್ಡರ್ಸ್ ಶಾಂಪೂ, ಪ್ಯಾಂಟೀನ್ ಶಾಂಪೂ, ಪ್ಯಾಂಪರ್ಸ್ ಬೇಬಿ ಡೈಪರ್ಸ್, ಜಿಲೆಟ್ ರೇಜರ್, ಶೇವಿಂಗ್ ಕ್ರೀಮ್ ಓಲ್ಡ್ ಸ್ಪೈಸ್ ಆಫ್ಟರ್ ಶೇವ್, ವಿಕ್ಸ್ ವೇಪೋರಬ್, ಓರಲ್ ಬಿ ಟೂಥ್ಬ್ರಷ್, ಪೇಸ್ಟ್
ಎಷ್ಟು ಅಗ್ಗ?: ಶೇ.5ರಿಂದ 15ರಷ್ಟು ಕಡಿತ (ಪ್ರತಿ ಪ್ಯಾಕ್ಗೆ 3ರಿಂದ 100 ರೂ.ವರೆಗೆ); ಉದಾಹರಣೆಗೆ, 30 ಗ್ರಾಂ ಜಿಲೆಟ್ ಶೇವಿಂಗ್ ಕ್ರೀಮ್ 45ರಿಂದ 40 ರೂ.ಗೆ ಇಳಿಕೆ; 150 ಗ್ರಾಂನ ಓಲ್ಡ್ ಸ್ಪೈಸ್ ಆಫ್ಟರ್ಶೇವ್ ಲೋಷನ್ 320ರಿಂದ 284 ರೂ.ಗೆ ಇಳಿಕೆ; ಓರಲ್ಬಿ ಕೇರ್ ಎವರಿಡೇ ಕೇರ್ ಬ್ರಷ್ 35ರಿಂದ 30 ರೂ.ಗೆ ಇಳಿಕೆ.
ಹಿಂದುಸ್ತಾನ್ ಯೂನಿಲೀವರ್ ಉತ್ಪನ್ನಗಳು: ಡವ್- ಕ್ಲಿನಿಕ್ ಶಾಂಪೂ, ಲಕ್ಸ್- ಲೈಫ್ಬಾಯ್ ಸಾಬೂನು, ಬ್ರೂ ಕಾಫಿ, ಕಿಸಾನ್ ಜಾಮ್ ಹಾರ್ಲಿಕ್ಸ್, ಬೂಸ್ಟ್ ಹೆಲ್ತ್ ಡ್ರಿಂಕ್, ಪೆಪ್ಸೊಡೆಂಟ್-ಕ್ಲೋಸ್ಅಪ್ ಟೂಥ್ಪೇಸ್ಟ್, ಟಾಲ್ಕಂ ಫೇಸ್ ಪೌಡರ್ಗಳು.
ಎಷ್ಟು ಅಗ್ಗ?: ಶೇ.5ರಿಂದ 15ರಷ್ಟು ಕಡಿತ; ಲೈಫ್ಬಾಯ್ ಸೋಪ್ 68ರಿಂದ 60 ರೂ.ಗೆ ಇಳಿಕೆ; ಲಕ್ಸ್ ರೇಡಿಯಂಟ್ ಗ್ಲೋ ಸೋಪ್ 96ರಿಂದ 85 ರೂ.ಗೆ ಇಳಿಕೆ. 200 ಗ್ರಾಂನ ಹಾರ್ಲಿಕ್ಸ್ ಚಾಕೊಲೇಟ್ 130 ರಿಂದ 110 ರೂ.ಗೆ ಇಳಿಕೆ; 200 ಗ್ರಾಂ ಬೂಸ್ಟ್ 124ರಿಂದ 110 ರೂ.ಗೆ ಇಳಿಕೆ; 200 ಗ್ರಾಂ ಕಿಸಾನ್ ಜಾಮ್ 90ರಿಂದ 80 ರೂ.ಗೆ ಇಳಿಕೆ; 75 ಗ್ರಾಂ ಬ್ರೂ ಕಾಫಿ 300 ರಿಂದ 270 ರೂ.ಗೆ ಇಳಿಕೆ; ಸಣ್ಣ, ಮೀಡಿಯಂ ಸೈಜಿನ ಶಾಂಪೂಗಳಿಗೆ ಶೇ. 20ರಷ್ಟು, ಪೌಡರ್ಗಳ ಮೇಲೆ ಶೇ. 11ರಷ್ಟು, ಟೂಥ್ಪೇಸ್ಟ್ ಮೇಲೆ ಶೇ. 8ರಷ್ಟು ಡಿಸ್ಕೌಂಟ್.
ಇಮಾಮಿ ಉತ್ಪನ್ನಗಳು: ಸಾಬೂನುಗಳು, ಟೂಥ್ಪೇಸ್ಟ್ಗಳು, ಹೇರ್ಆಯಿಲ್, ಪೌಡರ್ ಇತ್ಯಾದಿ.
ಎಷ್ಟು ಅಗ್ಗ?: ಒಟ್ಟಾರೆ ಶೇ. 5ರಿಂದ ಶೇ. 15ರವರೆಗೆ ಬೆಲೆ ಇಳಿಕೆ
ಮದರ್ ಡೇರಿ ಉತ್ಪನ್ನಗಳು: ಮಿಲ್ಕ್ಶೇಕ್, ಬೆಣ್ಣೆ, ತುಪ್ಪ, ಐಸ್ಕ್ರೀಂ, ಉಪ್ಪಿನಕಾಯಿ ಮುಂತಾದವು.
ಎಷ್ಟು ಅಗ್ಗ?: ಶೇ. 2ರಿಂದ ಶೇ. 30ರಷ್ಟು ಬೆಲೆ ಇಳಿಕೆ
ಐಟಿಸಿ ಉತ್ಪನ್ನಗಳು: ಸಾಬೂನು, ಶಾಂಪೂ, ಸ್ನ್ಯಾಕ್ಸ್, ಬಿಸ್ಕಿಟ್ಸ್ ಇತ್ಯಾದಿ.
ಎಷ್ಟು ಅಗ್ಗ?: ಎಲ್ಲ ವಸ್ತುಗಳ ಮೇಲೆ ಜಿಎಸ್ಟಿ ಇಳಿಕೆ ಸಂಪೂರ್ಣ ಲಾಭ ಗ್ರಾಹಕರಿಗೆ ವರ್ಗಾವಣೆ
ನೆಸ್ಲೆ ಉತ್ಪನ್ನಗಳು: ಮ್ಯಾಗಿ ನೂಡಲ್ಸ್, ಸಿರಿಯಲ್ಸ್, ನೆಸ್ಕೆಫೆ ಕಾಫಿಯಂತಹ ಬಿವರೇಜಸ್, ಹಾಲಿನ ಉತ್ಪನ್ನಗಳು. ್ಞ ಎಷ್ಟು ಅಗ್ಗ?: ದೊಡ್ಡ ಪ್ಯಾಕ್ಗಳ ಮೇಲೆ ಶೇ. 5ರಿಂದ 10ರಷ್ಟು ಬೆಲೆ ಇಳಿಕೆ
ಡಾಬರ್ ಉತ್ಪನ್ನಗಳು: ಟೂಥ್ಪೇಸ್ಟ್, ಹೇರ್ ಆಯಿಲ್, ಸಾಬೂನು, ಜ್ಯೂಸ್, ಜೇನುತುಪ್ಪ ಇತ್ಯಾದಿ.
ಎಷ್ಟು ಅಗ್ಗ?: ಶೇ. 5ರಿಂದ ಶೇ. 12ರಷ್ಟು ಇಳಿಕೆ
ಲಾಓರಿಯಲ್ ಉತ್ಪನ್ನಗಳು: ಸ್ಕಿನ್ಕೇರ್, ಪರ್ಫ್ಯೂಮ್ ಹೇರ್ ಕಲರ್, ಶಾಂಪೂ, ಪೌಡರ್ ಇತ್ಯಾದಿ.
ಎಷ್ಟು ಅಗ್ಗ?: ಶೇ. 5ರಿಂದ 15ರಷ್ಟು ಬೆಲೆ ಇಳಿಕೆ
ಹಿಮಾಲಯ ಉತ್ಪನ್ನಗಳು: ಸಾಬೂನು, ಶಾಂಪೂ, ಟೂಥ್ಪೇಸ್ಟ್ ಇತ್ಯಾದಿ ಪರ್ಸನಲ್ ಕೇರ್ ವಸ್ತುಗಳು.
ಎಷ್ಟು ಅಗ್ಗ?: ಶೇ. 5ರಿಂದ 10ರಷ್ಟು ಬೆಲೆ ಇಳಿಕೆ.
5 ರೂ. ಬಿಸ್ಕೆಟ್, 10 ರೂ. ಸಾಬೂನು, 20 ರೂ. ಟೂತ್ಪೇಸ್ಟ್ ಪ್ಯಾಕ್ಗಳಂತಹ ಜನಪ್ರಿಯ ಸೋವಿ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡುವುದರ ಬದಲು ಅವುಗಳಲ್ಲಿನ ಗ್ರಾಮೇಜ್ (ತೂಕ) ಹೆಚ್ಚಿಸಲು ಎಫ್ಎಂಸಿಜಿ ಕಂಪನಿಗಳು ಉದ್ದೇಶಿಸಿವೆ. ಗ್ರಾಹಕರ ಮನಸ್ಸು ಈ ನಿರ್ದಿಷ್ಟ ಬೆಲೆಗಳಿಗೆ ಫಿಕ್ಸ್ ಆಗಿದೆ. ಇವುಗಳ ಬೆಲೆಯನ್ನು 18 ರೂ., 9 ರೂ., 4.50 ರೂ. ಹೀಗೆ ವಿಚಿತ್ರ ಸಂಖ್ಯೆಗಳಿಗೆ ಇಳಿಸಿದರೆ ಗೊಂದಲ, ಚಿಲ್ಲರೆ ಸಮಸ್ಯೆ ಉಂಟಾಗುತ್ತದೆ. ಅದರ ಬದಲಿಗೆ, ಅದೇ ಬೆಲೆಯಲ್ಲಿ ಪ್ಯಾಕ್ನೊಳಗಿನ ವಸ್ತುವಿನ ಪ್ರಮಾಣವನ್ನು ಹೆಚ್ಚಿಸುತ್ತೇವೆ ಎಂದು ಈ ಕಂಪನಿಗಳು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿಗೆ (ಸಿಬಿಐಸಿ) ತಿಳಿಸಿವೆ.
ನೆಕ್ಸ್ಸ್ ಜನರೇಷನ್ ಜಿಎಸ್ಟಿ ಸುಧಾರಣೆಗಳು ದೇಶದ ಜನತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹಬ್ಬದ ಕೊಡುಗೆ. ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತಿದ್ದ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೂ ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದೆ. ನಿತ್ಯೋಪಯೋಗಿ ವಸ್ತುಗಳು ಸೋವಿಯಾಗಲಿವೆ. ಒಟ್ಟಾರೆಯಾಗಿ ಭಾರತದ ಆರ್ಥಿಕತೆಗೆ ದೊಡ್ಡ ಪ್ರಯೋಜನವಾಗಲಿದೆ. - ನರೇಂದ್ರ ಮೋದಿ ಪ್ರಧಾನಿ
ಜಿಎಸ್ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ಕಂಪನಿಗಳು ಕಣ್ಣಾಮುಚ್ಚಾಲೆ ಆಡುವಂತಿಲ್ಲ. ಬೆಲೆ ಇಳಿಸುತ್ತವೆಯೋ ಇಲ್ಲವೋ ಎಂಬುದರ ಮೇಲೆ ಕೇಂದ್ರ ಸರ್ಕಾರ ಮಂತ್ರಿಗಳು, ಅಧಿಕಾರಿಗಳು ನಿಗಾ ಇಡಲಿದ್ದಾರೆ. ವಾಣಿಜ್ಯ, ವಿತ್ತ, ಗ್ರಾಹಕ ವ್ಯವಹಾರ ಮತ್ತಿತರ ಸಚಿವಾಲಯಗಳ ಸಿಬ್ಬಂದಿ ಈಗಾಗಲೇ ಈ ಕುರಿತು ಉದ್ಯಮಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
ಮಾರುತಿ, ಜಾಗ್ವಾರ್, ಯಮಹಾ, ಹೋಂಡಾ, ಜೀಪ್, ಬಜಾಜ್ ಸೇರಿದಂತೆ ಹಲವು ಕಂಪನಿಗಳು ತಮ್ಮ ವಾಹನಗಳ ಬೆಲೆ ಇಳಿಕೆಯನ್ನು ಈಗಾಗಲೇ ಘೊಷಿಸಿವೆ. ಮಾರುತಿ 1.29 ಲಕ್ಷ ರೂ.ವರೆಗೆ ಇಳಿಸಿದೆ. ಎಸ್ಪ್ರೆಸ್ಸೊ 1,29,600 ರೂ., ಆಲ್ಟೊ ಕೆ10 1,07,600 ರೂ., ಸೆಲೆರಿಯೊ 94,100 ರೂ., ವ್ಯಾಗನ್-ಆರ್ 79,600 ರೂ., ಇಗ್ನಿಸ್ 71,300 ರೂ., ಸ್ವಿಫ್ಟ್ನ 84,600 ರೂ., ಬಲೆನೊ 86,100 ರೂ., ಟೂರ್ ಎಸ್ 67,200 ರೂ., ಡಿಜೈರ್ 87,700 ರೂ., ಫ್ರಾನ್ಸ್ಕ್ 1,12,600 ರೂ., ಬ್ರೆಝಾ 1,12,700 ರೂ., ಗ್ರಾ್ಯಂಡ್ ವಿಟಾರಾ 1.07 ಲಕ್ಷ ರೂ., ಜಿಮ್ನಿ 51,900 ರೂ., ಎರ್ಟಿಗಾ 46,400 ರೂ.,
ಎಕ್ಸ್ಎಲ್ಸಿಕ್ಸ್ 52,000 ರೂ., ಇನ್ವಿಕ್ಟೊ 61,700 ರೂ., ಇಕೋ 68,000 ರೂ., ಸೂಪರ್ ಕ್ಯಾರಿ ಎಲ್ಸಿವಿ 52,100 ರೂ. ಇಳಿಕೆಯಾಗಲಿದೆ. ಹೋಂಡಾ ಕಾರ್ಸ್ 95,500 ರೂ.ವರೆಗೆ ಬೆಲೆ ಕಡಿತಗೊಳಿಸಲಿದೆ. ಕಾಂಪ್ಯಾಕ್ಟ್ ಸೆಡಾನ್ ಅಮೇಜ್ 95,500 ರೂ., ಸಿಟಿ 57,500 ರೂ., ಲಿವೇಟ್ 58,400 ರೂ. ಕಡಿಮೆ ಆಗಲಿವೆ. ಜೀಪ್ನ ಕಂಪಾಸ್, ಮೆರಿಡಿಯನ್, ರಾಂಗ್ಲರ್, ಗ್ರಾ್ಯಂಡ್ ಚೆರೋಕೀ 1.26 ಲಕ್ಷ ರೂ.ನಿಂದ 4.8 ಲಕ್ಷ ರೂ.ವರೆಗೆ ಕಡಿಮೆಯಾಗಲಿವೆ. ಜಾಗ್ವಾರ್ ಲ್ಯಾಂಡ್ ರೋವರ್ 4.5 ಲಕ್ಷ ರೂ.ನಿಂದ 30.4 ಲಕ್ಷ ರೂ.ವರೆಗೆ ಕಡಿಮೆ ಮಾಡಲಿದೆ. ವೋಲ್ವೋ ಕಾರ್ ಐಸಿಇ ಪೋರ್ಟ್ಫೋಲಿಯೊ ಮೇಲೆ 6.9 ಲಕ್ಷ ರೂ.ವರೆಗೆ ಬೆಲೆ ಕಡಿತ ಮಾಡಿದೆ. ಯಮಹಾ 17,581 ರೂ.ವರೆಗೆ ಬೆಲೆ ಇಳಿಸಿದೆ. ಆರ್15 ಮಾಡೆಲ್ ಈಗ 2,12,020 ರೂ. ಇದ್ದು, 1,94,439 ರೂ. ಆಗಲಿದೆ. ರೇಝೆಡ್ಆರ್ 93,760 ರೂ.ನಿಂದ 86,001 ರೂ.ಗೆ ಇಳಿಯಲಿದೆ.