ನ್ಯೂಸ್

ವಕ್ಫ್ ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ದ್ವಿಮುಖ ನೀತಿ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ವಕ್ಫ್ ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ದ್ವಿಮುಖ ನೀತಿ ಏಕೆ? ವಕ್ಫ್ ಆಸ್ತಿ ತೆರವು ಮಾಡಲು ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತರಾಟೆ ತೆಗೆದುಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ಮೋದಿ ವಿರುದ್ಧ ಲ್ಯಾಂಡ್ ಜಿಹಾದ್ ಪ್ರತಿಭಟನೆ ಮಾಡಬೇಕಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ವಿಚಾರದಲ್ಲಿ ಈಗಾಗಲೇ ಸಿಎಂ, ಸಚಿವರು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಭಯ ನೀಡಿದ್ದಾರೆ. ಅವರೆಲ್ಲ ಹೇಳಿದ ಮೇಲೆ ಮತ್ತೇಕೆ ಅನುಮಾನ ಎಂದು ಕೇಳಿದರು.

ಬಿಜೆಪಿಯವರಿಗೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎನ್ನುವುದು ಗೊತ್ತಿಲ್ಲ. ಬಿಜೆಪಿ ಪ್ರಣಾಳಿಕೆಯಲ್ಲಿ ಏನಿತ್ತು? ವಕ್ಫ್ ಆಸ್ತಿ ಸಂರಕ್ಷಣೆ ಮಾಡುತ್ತೇವೆ ಎಂದು ಹೇಳಿದ್ದರು. ಇದು ನಿಜವೆ, ಸುಳ್ಳೆ? ಇದರ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೊದಲು ಉತ್ತರ ನೀಡಲಿ ಎಂದು ಸವಾಲೆಸೆದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೋಟೀಸ್ ನೀಡಿರುವ ಕುರಿತ ಪ್ರಶ್ನೆಗೆ, ಕಾನೂನು ಪ್ರಕಾರ ಸಿಎಂ ತನಿಖೆಗೆ ಹೋಗಬೇಕಲ್ವಾ, ವಿಚಾರಣೆಗೆ ಸಿಎಂ ಹಾಜರಾಗುತ್ತಾರೆ ಎಂದರು.

ಸಿಎಂ ರಾಜೀನಾಮೆ ಕೇಳುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೊದಲು ರಾಜೀನಾಮೆ ನೀಡಲಿ. ಬಿಜೆಪಿಯಲ್ಲಿ ವಿಜಯೇಂದ್ರ ಬಗ್ಗೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ ಏನು ಹೇಳುತ್ತಿದ್ದಾರೆ. ಅದಕ್ಕೆ ವಿಜಯೇಂದ್ರ ಮೊದಲು ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.

ಯಡಿಯೂರಪ್ಪ ಏಕೆ ಉಪ ಚುನಾವಣೆ ಪ್ರಚಾರಕ್ಕೆ ಹೋಗಿಲ್ಲ. ಪೋಕ್ಸೋ ಕೇಸ್ ಮುಜುಗರಕ್ಕಾ? ಹೈಕಮಾಂಡ್ ಪ್ರಚಾರಕ್ಕೆ ಹೋಗಬೇಡಿ ಅಂದಿದೆಯಂತೆ. ಸ್ಟೇಜ್ ಹತ್ತಬೇಡಿ ಅಂದಿದೆ ಎಂಬ ಮಾಹಿತಿ ಇದೆ ಎಂದು ಹೇಳಿದರು.

ಪಾಕಿಸ್ತಾನದಿಂದ ಹೇಗೆ ದೇಶದ ಒಳಗೆ ಬರುತ್ತಾರೆೆ? ನಿಮ್ಮದೇ ಕೇಂದ್ರ ಸರ್ಕಾರ ಅಲ್ವಾ? ನೀವೇ ಅಲ್ವಾ ಗಡಿ ಕಾಯುವುದು. ನಿಮ್ಮ ಕೇಂದ್ರ ಸರ್ಕಾರ ಇದಕ್ಕೆ ಉತ್ತರ ನೀಡಬೇಕಲ್ಲವೆ? ಹಿಂದೂಗಳಿಗೆ ಹೇಗೆ ಆತಂಕ ಇದೆ. ಭದ್ರತೆ ನೀವೆ ಕೋಡಬೇಕಲ್ಲವೆ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.