ನ್ಯೂಸ್

ವಾಟ್ಸ್​ಆ್ಯಪ್​ ನಿಯಮ ಹಿಂಪಡೆಯಲು ಸೂಚನೆ; ಭಾರತೀಯರ ಡೇಟಾ ರಕ್ಷಣೆಗೆ ಕೇಂದ್ರ ಕ್ರಮ

ನವದೆಹಲಿ: ಭಾರತದಲ್ಲಿ ವಾಟ್ಸ್​ಆ್ಯಪ್​ ಜಾರಿಗೆ ತಂದಿರುವ ನೂತನ ಪ್ರೖೆವೆಸಿ ನಿಯಮ ವಿವಾದಕ್ಕೀಡಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ವಿವಾದಿತ ಪ್ರೖೆವೆಸಿ ನಿಯಮವನ್ನು ಭಾರತೀಯರ ಮಟ್ಟಿಗೆ ಹಿಂಪಡೆಯಬೇಕು. ಆ ಮೂಲಕ ಭಾರತೀಯ ಬಳಕೆದಾರರ ಮಾಹಿತಿ ಖಾಸಗಿತನ ಮತ್ತು ಡೇಟಾ ಭದ್ರತೆಯನ್ನು ಗೌರವಿಸಬೇಕು ಎಂದು ವಾಟ್ಸ್​ಆಪ್​ಗೆ ಸೂಚಿಸಿದೆ.

ಮೂಲಗಳ ಪ್ರಕಾರ, ಕಂಪನಿಗೆ ಪ್ರಶ್ನಾವಳಿಯ ದೊಡ್ಡ ಪಟ್ಟಿಯೊಂದನ್ನು ಕೇಂದ್ರ ಸರ್ಕಾರ ರವಾನಿಸಿದ್ದು, ಅದಕ್ಕೆ ಸ್ಪಷ್ಟೀಕರಣವನ್ನೂ ಕೇಳಿದೆ. ಯುರೋಪ್ ಮಾದರಿಯಲ್ಲೇ ಭಾರತೀಯರಿಗೂ ಬಳಕೆದಾರರ ಪ್ರೖೆವೆಸಿ ಕಾಪಾಡುವುದಕ್ಕೆ ಕೇಂದ್ರ ಸರ್ಕಾರ ಮುತುವರ್ಜಿವಹಿಸಿದೆ.

ಕೇಂದ್ರ ಕೇಳಿದ ಪ್ರಶ್ನೆಗಳು

  • ಭಾರತೀಯ ಬಳಕೆದಾರರಿಂದ ಸಂಗ್ರಹಿಸುವ ನಿಖರವಾದ ಕೆಟಗರಿಗಳನ್ನು ಬಹಿರಂಗಪಡಿಸಿ
  • ವಾಟ್ಸ್​ಆಪ್ ಬಳಕೆಗಾಗಿ ಒದಗಿಸಿರುವ ಹಕ್ಕುಗಳು ಮತ್ತು ಬಳಕೆದಾರರ ಒಪ್ಪಿಗೆಯ ವಿವರ ಕೊಡಿ
  • ಬಳಕೆದಾರರ ಪ್ರೊಫೈಲಿಂಗ್ ಮಾಡುತ್ತಿದ್ದರೆ, ಏನೆಲ್ಲ ಮಾಹಿತಿ ಸಂಗ್ರಹಿಸುತ್ತಿದ್ದೀರಿ ಎಂಬ ಮಾಹಿತಿ ಒದಗಿಸಿ
  • ಪ್ರೖೆವೆಸಿ ಪಾಲಿಸಿಯಲ್ಲಿ ನೀವು ಭಾರತ ಮತ್ತು ಇತರೆ ರಾಷ್ಟ್ರಗಳಲ್ಲಿ ಯಾವೆಲ್ಲ ಭಿನ್ನತೆಯನ್ನು ತೋರಿದ್ದೀರಿ ಎಂಬ ವಿವರ ನೀಡಿ
  • ಭಾರತೀಯ ಬಳಕೆದಾರರ ಡೇಟಾವನ್ನು ಯಾವ ಸರ್ವರ್​ನಲ್ಲಿ ಸಂಗ್ರಹಿಸುತ್ತಿದ್ದೀರಿ?
  • ಬಳಕೆದಾರರ ವಿವರವನ್ನು ವಾಟ್ ಆಪ್ ಮೂರನೇ ಕಂಪನಿ, ವ್ಯಕ್ತಿಗಳ ಜತೆಗೆ ಹಂಚಿಕೊಳ್ಳುತ್ತಿದೆಯೇ? ಹಾಗಿದ್ದರೆ ಅವುಗಳ ವಿವರ ನೀಡಿ.
  • ಡೇಟಾ ಸೆಕ್ಯೂರಿಟಿ ನೀತಿ, ಇನ್​ಫಾರ್ಮೇಷನ್​ ಸೆಕ್ಯೂರಿಟಿ ನೀತಿ, ಸೈಬರ್ ಸೆಕ್ಯೂರಿಟಿ ನೀತಿ, ಪ್ರೖೆವೆಸಿ ಪಾಲಿಸಿ ಮತ್ತು ಎನ್​ಕ್ರಿಪ್ಷನ್​ ಪಾಲಿಸಿ ಕುರಿತು ಮಾಹಿತಿ ಕೊಡಿ.