ಶಿವಮೊಗ್ಗ: ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಆ.10ರಿಂದ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಮುಂದಿನ ದಿನಗಳಲ್ಲಿ ವಿಐಎಸ್‌ಎಲ್ ಶೀಘ್ರದಲ್ಲಿಯೇ ಉನ್ನತ ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ಗತ ವೈಭವವನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ಸ್ಪಷ್ಟ ನಿರ್ದೇಶನದೊಂದಿಗೆ ಸೈಲ್(ಭಾರತೀಯ ಉಕ್ಕು ಪ್ರಾಧಿಕಾರ) ಆಡಳಿತ ಮಂಡಳಿಯು ವಿಐಎಸ್‌ಎಲ್ನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಪುನರಾರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿದೆ. ಅದರನ್ವಯ ಬಾರ್‌ಮಿಲ್ ಕಾರ್ಯಾಚರಣೆಗಳು ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ.
ವಿಐಎಸ್‌ಎಲ್ ಅನ್ನು ನಂಬಿರುವ ಉದ್ಯೋಗಿ ಸಮುದಾಯಕ್ಕೆ ಮತ್ತು ಭದ್ರಾವತಿಯ ಜನ ಸಾಮಾನ್ಯರಿಗೆ ಈ ಒಂದು ನಿರ್ಧಾರ ಮಹತ್ವದ ಕ್ಷಣವಾಗಿದೆ. ಕೇಂದ್ರ ಸರ್ಕಾರದ ಸಂಬಂಧಿಸಿದ ಮಂತ್ರಿಗಳೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಲಾದ ನಿರಂತರ ಪ್ರಯತ್ನದ ಫಲವಾಗಿ ಇಂತಹ ಒಂದು ಮಹತ್ತರವಾದ ನಿರ್ಣಯವನ್ನು ಸೈಲ್ ಕೈಗೊಳ್ಳಲು ಸಹಕಾರವಾಗಿದ್ದು, ಈ ಮಹತ್ವದ ಮೈಲಿಗಲ್ಲನ್ನು ಪಡೆಯಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ. ವಿಐಎಸ್‌ಎಲ್ನ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ನೀಡಿದಂತಹ ಭರವಸೆಗಳನ್ನು ಈಡೇರಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.