ನ್ಯೂಸ್

ರೈಲ್ವೆಗೆ ಕಡಿಮೆ ಅನುದಾನ ಹೆಚ್ಚು ಅನುಷ್ಠಾನ: ಭವಿಷ್ಯದ ರೈಲು ವ್ಯವಸ್ಥೆಗೆ ಹಲವು ಯೋಜನೆಗಳು; ಸರಕು ಸಾಗಣೆ ರೈಲುಗಳಿಗೆ ಹೆಚ್ಚಿನ ಒತ್ತು

Webdesk - Ravikanth

ನವದೆಹಲಿ: ಭವಿಷ್ಯದ ರೈಲ್ವೆ ವ್ಯವಸ್ಥೆಯನ್ನು ಉತ್ತಮ ಹಾಗೂ ಗಟ್ಟಿಗೊಳಿಸುವ ಪರಿಕಲ್ಪನೆಯೊಂದಿಗೆ ಕೇಂದ್ರ ಬಜೆಟ್​ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಕ್ಷೇತ್ರಕ್ಕೆ 1,10,055 ಕೋಟಿ ರೂ. ಮೀಸಲಿಡಲಾಗಿದೆ. ವಿಶ್ವದ ಅತಿದೊಡ್ಡ ರೈಲ್ವೆ ಸಂಪರ್ಕ ಜಾಲ ಹೊಂದಿರುವ ಭಾರತೀಯ ರೈಲ್ವೆಯಲ್ಲಿ ಆತ್ಮನಿರ್ಭರ ಪರಿಕಲ್ಪನೆ ಅನುಷ್ಠಾನಗೊಳಿಸಲಾಗುತ್ತಿದೆ. ಜತೆಗೆ ರೈಲ್ವೆ ಸೇವೆ ಇನ್ನಷ್ಟು ಭದ್ರಗೊಳಿಸುವಂತಹ ಭವಿಷ್ಯದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಹಾಗೆಯೇ, ರೈಲ್ವೆ ಸೇವೆ ಮೂಲಕ ಆರ್ಥಿಕ ಪರಿಸ್ಥಿತಿ ವೃದ್ಧಿ ಮಾಡುವಂತಹ ಸರಕು ಸಾಗಣೆ ಕಾರಿಡಾರ್​ಗಳ ಅನುಷ್ಠಾನದ ಬಗ್ಗೆಯೂ ಪ್ರಸ್ತಾಪಿಸಿ ಹಣ ಮೀಸಲಿಸಲಾಗಿದೆ.

ಶೇ.50 ಕಡಿತ: ಕಳೆದ ಬಾರಿಗಿಂತ ಈ ಬಾರಿ ರೈಲ್ವೆ ಕ್ಷೇತ್ರಕ್ಕೆ ಶೇ.50 ಕಡಿಮೆ ಅನುದಾನ ಮೀಸಲಿಡಲಾಗಿದೆ. 2020-21ನೇ ಸಾಲಿನ ಬಜೆಟ್​ನಲ್ಲಿ ರೈಲ್ವೆ ಯೋಜನೆಗಳಿಗಾಗಿ 2,25,913 ಕೋಟಿ ರೂ. ನಿಗದಿ ಮಾಡಲಾಗಿತ್ತು. 2021-22ನೇ ಸಾಲಿಗೆ 1,10,055 ಕೋಟಿ ರೂ. ಮೀಸಲಿಡಲಾಗಿದೆ. ಅದರಲ್ಲಿ 1,07,100 ಕೋಟಿ ರೂ.ಗಳನ್ನು ಬಂಡವಾಳ ವೆಚ್ಚವನ್ನಾಗಿ ನಿಗದಿ ಮಾಡಲಾಗಿದೆ.

ರೈಲ್ವೆ ಸುರಕ್ಷತಾ ವ್ಯವಸ್ಥೆ: ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ವಿಸ್ತಾ ಡೋಮ್ ಎಲ್​ಎಚ್​ಬಿ ಬೋಗಿಗಳನ್ನು ಪರಿಚಯಿಸಲಾಗುತ್ತಿದೆ. ಪ್ರಮುಖವಾಗಿ ಪ್ರವಾಸಿ ತಾಣ ಮಾರ್ಗದಲ್ಲಿ ಈ ಬೋಗಿಗಳ ಮೂಲಕ ರೈಲುಗಳು ಸೇವೆ ನೀಡಲಿವೆ. ಜತೆಗೆ ಹೈಡೆನ್ಸಿಟಿ ಮತ್ತು ಹೆಚ್ಚು ಬಳಕೆಯಾಗುವ ಮಾರ್ಗಗಳಲ್ಲಿ ಸ್ವದೇಶಿ ತಂತ್ರಜ್ಞಾನದ ರೈಲ್ವೆ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.

ಸರಕು ಸಾಗಣೆ ಕಾರಿಡಾರ್: ಸರಕು ಸಾಗಣೆಯಲ್ಲಿ ಭಾರಿ ವಾಹನಗಳ ಬಳಕೆ ಕಡಿಮೆ ಮಾಡಲು ರೋ-ರೋ ಮಾದರಿಯ ರೈಲುಗಳ ಸಂಚಾರ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ 2022ರ ಜೂನ್​ನಲ್ಲಿ ಪಶ್ಚಿಮ ಮತ್ತು ಪೂರ್ವ ನಿಗದಿತ ಸರಕು ಸಾಗಣೆ ಕಾರಿಡಾರ್​ಗಳು ಕಾರ್ಯನಿರ್ವಹಿಸಲಿವೆ. ವಿಮಾನನಿಲ್ದಾಣ ಮಾರ್ಗಕ್ಕೆ 15 ಸಾವಿರ ಕೋಟಿ ರೂ., ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೋಜನೆಯ ವಿಮಾನನಿಲ್ದಾಣ ಸಂಪರ್ಕ ಮಾರ್ಗಕ್ಕೆ ಕೇಂದ್ರ ಬಜೆಟ್​ನಲ್ಲಿ ಅನುದಾನ ಘೋಷಿಸಲಾಗಿದೆ.

ಭವಿಷ್ಯದ ರೈಲ್ವೆಗೆ ಒತ್ತು: ಅನುದಾನ ಕಡಿಮೆ ಘೋಷಣೆಯಾಗಿದ್ದರೂ ಹೊಸ ಯೋಜನೆಗಳಿಗಿಂತ ಭವಿಷ್ಯದ ರೈಲ್ವೆ ವ್ಯವಸ್ಥೆ ಗಟ್ಟಿಗೊಳಿಸುವತ್ತ ಹೆಚ್ಚಿನ ಗಮನಹರಿಸಲಾಗಿದೆ. ಪ್ರಮುಖವಾಗಿ 2030ರಲ್ಲಿ ರೈಲ್ವೆ ಪ್ರಯಾಣಿಕರು, ರೈಲುಗಳ ಸಂಚಾರವನ್ನು ಗಮನದಲ್ಲಿಟ್ಟು ಕೊಂಡು ರಾಷ್ಟ್ರೀಯ ರೈಲ್ವೆ ಯೋಜನೆ 2030 ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಅದರ ಮೂಲಕ ಪ್ರಯಾಣಿಕರ ರೈಲು ಸೇವೆಗಿಂತ ರೈಲುಗಳ ಮೂಲಕ ಸರಕು ಸಾಗಣೆ ಹೆಚ್ಚಳಕ್ಕೆ ಕ್ರಮವಹಿಸಲು ಮುಂದಾಗಿದೆ.

ಪಿಪಿಪಿ ಮಾದರಿಯಲ್ಲಿ ನಿರ್ಮಾಣ: ಪೂರ್ವ ಸರಕು ಸಾಗಣೆ ಕಾರಿಡಾರ್​ನಲ್ಲಿ 263.7 ಕಿ.ಮೀ. ಉದ್ದದ ಸೋನ್​ನಗರ್- ಗೊಮೋಹ್ ಮಾರ್ಗವನ್ನು 2021-22ನೇ ಸಾಲಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದು ಹಾಗೂ 274.3 ಕಿ.ಮೀ. ಉದ್ದದ ಗೋಮೋಗ್-ಡಂಕುಣಿ ಮಾರ್ಗವನ್ನು ಶೀಘ್ರವೇ ಸರಕು ಸಾಗಣೆ ಮಾರ್ಗವನ್ನಾಗಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವ ಪೂರ್ವ ಕರಾವಳಿ ಕಾರಿಡಾರ್ ಆದ ಖರಗ್​ಪುರ್-ವಿಜಯವಾಡ, ಪೂರ್ವ-ಪಶ್ಚಿಮ ಕಾರಿಡಾರ್ ಇತ್ರಸಿ-ವಿಜಯವಾಡ ಮಾರ್ಗದ ವಿವರ ಯೋಜನಾ ವರದಿ ರೂಪಿಸಲು ಕ್ರಮಕ್ಕೆ ನಿರ್ಧರಿಸಲಾಗಿದೆ.

ಬ್ರಾಡ್​ಗೇಜ್ ಶೇ.100 ವಿದ್ಯುದ್ಧೀಕರಣ: ದೇಶದಲ್ಲಿನ ಬ್ರಾಡ್​ಗೇಜ್ ಮಾರ್ಗವನ್ನು ಇನ್ನೆರಡು ವರ್ಷದಲ್ಲಿ ಶೇ.100 ವಿದ್ಯುದ್ಧೀಕರಿಸುವ ಪ್ರಸ್ತಾಪ ಬಂದಿದೆ. ಸದ್ಯ 2020ರ ಅಕ್ಟೋಬರ್ 1ರ ದತ್ತಾಂಶ ಪ್ರಕಾರ 41,548 ರೈಲ್ವೆ ಕಿ.ಮೀ. ಉದ್ದದ ಬ್ರಾಡ್​ಗೇಜ್ ವಿದ್ಯುದ್ಧೀಕರಿಸಲಾಗಿದೆ. 2021ರ ಕೊನೆಯಲ್ಲಿ ಅದನ್ನು 46,000 ರೈಲ್ವೆ ಕಿ.ಮೀ.ಗೆ ವಿದ್ಯುದ್ಧೀಕರಣ ವಿಸ್ತರಿಸುವುದು ಹಾಗೂ 2023ರ ಡಿಸೆಂಬರ್ ವೇಳೆಗೆ ಶೇ.100 ರೈಲ್ವೆ ಮಾರ್ಗಗಳನ್ನು ವಿದ್ಯುದ್ಧೀಕರಿಸುವ ಗುರಿ ಹೊಂದಲಾಗಿದೆೆ.

ಸಾರ್ವಜನಿಕ ಸಾರಿಗೆಗೆ 18 ಸಾವಿರ ಕೋಟಿ ರೂ.: ವೈಯಕ್ತಿಕ ಸಾರಿಗೆ ಬಳಕೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಮೂಹ ಸಾರಿಗೆ ಅಥವಾ ಸಾರ್ವಜನಿಕ ಸಾರಿಗೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಮೆಟ್ರೋ ರೈಲು ಮತ್ತು ಬಸ್​ಗಳ ಸಂಚಾರ ಹೆಚ್ಚಿಸಲು ಈ ಬಾರಿಯ ಬಜೆಟ್​ನಲ್ಲಿ 18 ಸಾವಿರ ಕೋಟಿ ರೂ. ಮೀಸಲಿಡಲಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ 20 ಸಾವಿರ ಬಸ್​ಗಳ ನಿರ್ವಹಣೆ ಮತ್ತು ಪೂರೈಕೆಯಂತಹ ಯೋಜನೆಯನ್ನೂ ಪರಿಚಯಿಸಲಾಗುತ್ತದೆ.

ಎರಡನೇ ಹಂತದ ನಗರಗಳಲ್ಲಿ ಮೆಟ್ರೋ ಲೈಟ್, ನಿಯೋ: ದೇಶದಲ್ಲಿ 702 ಕಿ.ಮೀ. ಉದ್ದದ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆ ನೀಡಲಾಗುತ್ತಿದ್ದು, 1,016 ಕಿ.ಮೀ. ಉದ್ದದ ಮೆಟ್ರೋ ಮತ್ತು ಆರ್​ಆರ್​ಟಿಎಸ್ ಮಾರ್ಗಗಳು ನಿರ್ಮಾಣ ಹಂತದಲ್ಲಿವೆ. ಒಟ್ಟು 27 ನಗರಗಳಲ್ಲಿ ಈ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಜತೆಗೆ 2ನೇ ಹಂತದ ನಗರಗಳಲ್ಲಿ ಕಡಿಮೆ ವೆಚ್ಚದಲ್ಲಿ ಅನುಷ್ಠಾನಗೊಳಿಸಬಹುದಾದ ಮೆಟ್ರೋ ಲೈಟ್ ಮತ್ತು ಮೆಟ್ರೋ ನಿಯೋ ರೈಲುಗಳ ಸಂಚಾರ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

  • ರಾಷ್ಟ್ರೀಯ ರೈಲ್ವೆ ಯೋಜನೆ - 2030ರ ವೇಳೆಗೆ ಅಗತ್ಯ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವುದು
  • 2050ರ ರೈಲ್ವೆ ಟ್ರಾಫಿಕ್ ಮುನ್ನೋಟದ ಅಗತ್ಯಗ ಳೊಂದಿಗೆ ರೂಪಿತವಾಗಿದೆ ರಾಷ್ಟ್ರೀಯ ರೈಲ್ವೆ ಯೋಜನೆ
  • ರೇಲ್ವೆ ಸರಕು ಸಾಗಣೆಯ ಪ್ರಮಾಣವನ್ನು ಈಗಿರುವ ಶೇಕಡ 27ರಿಂದ ಶೇಕಡ 45ಕ್ಕೆ ಹೆಚ್ಚಿಸುವ ಯೋಜನೆ
  • ದೇಶೀಯವಾಗಿ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲ್ವೆ ರಕ್ಷಣಾ ವ್ಯವಸ್ಥೆಯನ್ನು ಶೀಘ್ರವೇ ಲೋಕಾರ್ಪಣೆಗೊಳಿಸಲಾಗುವುದು.
  • 2023ರ ಡಿಸೆಂಬರ್ ವೇಳೆಗೆ ಶೇ.100 ರೈಲ್ವೆ ಮಾರ್ಗಗಳನ್ನು ವಿದ್ಯುದ್ಧೀಕರಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
  • ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೋಜನೆಯ ವಿಮಾನನಿಲ್ದಾಣ ಸಂಪರ್ಕ ಮಾರ್ಗಕ್ಕೆ ಕೇಂದ್ರ ಬಜೆಟ್​ನಲ್ಲಿ 14,788 ಕೋಟಿ ರೂಪಾಯಿ ಅನುದಾನ.
  • ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸುವುದಕ್ಕಾಗಿ 18,000 ಕೋಟಿ ರೂಪಾಯಿ ಅನುದಾನವನ್ನು ಈ ಸಲದ ಮುಂಗಡಪತ್ರದಲ್ಲಿ ಮೀಸಲಿಡಲಾಗಿದೆ.
  • 1,957.5 ಕೋಟಿ ರೂ. ವೆಚ್ಚದಲ್ಲಿ 11.5 ಕಿ.ಮೀ. ಉದ್ದದ ಕೊಚ್ಚಿ ಮೆಟ್ರೋ ರೈಲಿನ 2ನೇ ಹಂತದ ಯೋಜನೆ, 63,246 ಕೋಟಿ ರೂ. ವೆಚ್ಚದ 118.9 ಕಿ.ಮೀ. ಉದ್ದದ ಚೆನ್ನೈ ಮೆಟ್ರೋ ರೈಲು ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ.