ನ್ಯೂಸ್

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ : ಎಚ್.ಡಿ. ಕುಮಾರಸ್ವಾಮಿ

ನಾನು ಅಧಿಕಾರದಲ್ಲಿ ಇರುವವರೆಗೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ, ಬಜೆಟ್ ವಿಚಾರವಾಗಿ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಟೀಕೆ ಮಾಡುತ್ತಿರುವುದು ಸರಿಯಲ್ಲ. ಈ ಕೇಂದ್ರ ಈ ಹಿಂದೆ ನೀಡಿದ ಅನುದಾನವನ್ನೇ ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಮಾತ್ರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂಬ ‘ಐಎನ್‌ಡಿಐಎ’ ಮೈತ್ರಿಕೂಟದ ಆರೋಪದಲ್ಲಿ ಹುರುಳಿಲ್ಲ. ಬಜೆಟ್‌ನಲ್ಲಿ ಪ್ರತಿ ರಾಜ್ಯದ ಹೆಸರು ಉಲ್ಲೇಖಿಸಲು ಸಾಧ್ಯವಿಲ್ಲ. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಕೆಲವು ರಾಜ್ಯದ ಹೆಸರು ಉಲ್ಲೇಖಿಸಿದ ಮಾತ್ರಕ್ಕೆ ಆ ರಾಜ್ಯಕ್ಕೆ ಸೀಮಿತವಾದ ಬಜೆಟ್ ಅನ್ನುವುದು ಸರಿಯಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಂಧ್ರಪ್ರದೇಶ ವಿಭಜನೆಯಾದ ಸಂದರ್ಭ ಅಂದಿನ ಯುಪಿಎ ಸರ್ಕಾರ ವಿಶೇಷ ಅನುದಾನ ನೀಡುವುದ ಪ್ರಸ್ತಾವನೆ ಮಾಡಿತ್ತು. ಈ ಪ್ರಕಾರ ಅನುದಾನ ನೀಡಲಾಗಿದೆ. ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಟಾಚಾರಕ್ಕೆ ದೆಹಲಿಯಲ್ಲಿ ಸಂಸದರ ಸಭೆ ನಡೆಸಿ ರಾಜ್ಯದ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದರು. ಸಂಸದರಿಗೆ ಮನವಿ ಸಲ್ಲಿಸಿದರೆ ಬೇಡಿಕೆ ಈಡೇರಲು ಸಾಧ್ಯವೇ? ಇವರು ಕೇಂದ್ರ ಸಚಿವರನ್ನು ಭೇಟಿಯಾಗಿ ಏತಕ್ಕೆ ಚರ್ಚಿಸುವ ಆಸಕ್ತಿ ತೋರಲಿಲ್ಲ? ಕೇಂದ್ರದಿಂದ ತೆರಿಗೆ ಹಣ ಬರುತ್ತಿಲ್ಲ, ಅನುದಾನ ಬರುತ್ತಿಲ್ಲ ಎಂದು ಬೈಕೊಂಡು ತಿರುಗುವುದು ರಾಜ್ಯ ಸರ್ಕಾರದ ಕೆಲಸವಲ್ಲ. ರಾಜ್ಯ ಸರ್ಕಾರ ತನ್ನ ಪಾಲಿನ ಕರ್ತವ್ಯ ನಿಭಾಯಿಸಲು ವಿಫಲವಾಗಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಈ ಹಿಂದೆ ಬೆಂಗಳೂರು ಪೆರಿಫೆರಲ್ ರಿಂಗ್‌ರೋಡ್ ನಿರ್ಮಾಣಕ್ಕೆ 3 ಸಾವಿರ ಕೋಟಿ ರೂ. ಘೋಷಣೆ ಮಾಡಿತ್ತು. ಆದರೆ, ಈ ಯೋಜನೆಗೆ ರಾಜ್ಯ ಸರ್ಕಾರ ಎಷ್ಟು ಮ್ಯಾಜಿಂಗ್ ಗ್ರಾೃಂಟ್ ಇಟ್ಟಿದೆ? ಕೇಂದ್ರ ಸರ್ಕಾರ ನೀಡಿದ ಹಲವಾರು ಅನುದಾನಕ್ಕೆ ರಾಜ್ಯ ಸರ್ಕಾರ ಇನ್ನೂ ಬಳಕೆ ಪ್ರಮಾಣ ಪತ್ರವನ್ನೇ ನೀಡಿಲ್ಲ. ಮೊದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ ನಂತರ ಕೇಂದ್ರ ಸರ್ಕಾರವನ್ನು ಟೀಕಿಸಲಿ. ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿಲ್ಲ, ರಾಜ್ಯ ಸರ್ಕಾರದ ನಿಲುವಿನಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.