ನ್ಯೂಸ್

ದೇಶಾದ್ಯಂತ ಮೀನುಗಾರರ ಗಣತಿಗೆ ಕೇಂದ್ರ ಅಸ್ತು! ಮೀನುಗಾರರ ಕಲ್ಯಾಣಕ್ಕೆ ದತ್ತಾಂಶ ಸಂಗ್ರಹ

| ಶಿವರಾಜ ಎಂ. ಬೆಂ.ಗ್ರಾಮಾಂತರ

  • ಮತ್ಸ್ಯಕೃಷಿ ಅಭಿವೃದ್ಧಿಗೆ ಯೋಜನೆ
  • ಸ್ವಯಂ ನೋಂದಣಿಗೆ ಡಿಜಿಟಲ್ ವೇದಿಕೆ

ಹೈನೋದ್ಯಮದ ಪ್ರಗತಿಗಾಗಿ ರೂಪಿಸಿರುವ ಜಾನುವಾರು ಗಣತಿಯಂತೆ ಮೊಟ್ಟಮೊದಲ ಬಾರಿಗೆ ದೇಶಾದ್ಯಂತ ಮೀನುಗಾರರ ಗಣತಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಜಾತಿಗಣತಿ, ಜನಗಣತಿ, ಜಾನುವಾರು ಗಣತಿ ಸಾಲಿಗೆ ಈಗ ಮೀನುಗಾರರ ಗಣತಿ ಸೇರ್ಪಡೆಯಾಗುತ್ತಿದ್ದು, ಗಣತಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಇದುವರೆಗೆ ದೇಶದಲ್ಲಿ ಎಷ್ಟು ಮಂದಿ ಮೀನುಗಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಬಗ್ಗೆ ಅಧಿಕೃತ ಅಂಕಿ-ಅಂಶಗಳಿಲ್ಲ. ಇದರಿಂದ ಮೀನುಗಾರರಿಗೆ ರೂಪಿಸಿರುವ ಯೋಜನೆಗಳು ಅರ್ಹರಿಗೆ ತಲುಪುತ್ತಿದೆಯೋ?, ಇಲ್ಲವೋ? ಎಂಬ ಬಗ್ಗೆ ಅನುಮಾನಗಳಿದ್ದು, ಈ ಹಿನ್ನೆಲೆಯಲ್ಲಿ ಮೀನುಗಾರರ ಗಣತಿ ಮಹತ್ವ ಎನಿಸಿದೆ.

ಸ್ವಯಂ ನೋಂದಣಿ

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಈ ಕಾರ್ಯಕ್ರಮ ರೂಪಿಸಿದ್ದು, ಮೀನುಗಾರರ ಗಣತಿಗಾಗಿಯೇ ಎನ್​ಎಫ್​ಡಿಪಿ ಎಂಬ (ನ್ಯಾಷನಲ್ ಪಿಶ್ಯರಿ ಡಿಜಿಟಲ್ ಪ್ಲಾಟ್​ಪಾಮ್ರ್) ಪೋರ್ಟಲ್ ರೂಪಿಸಿದ್ದು, ಮೀನುಗಾರರು ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮತ್ಸ್ಯ ಕೃಷಿಯ ಸಮಗ್ರ ಅಭಿವೃದ್ಧಿಗೆ ಹೊಸಹೊಸ ಯೋಜನೆ ರೂಪಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಮೂಲಕ ಮೀನುಗಾರ ಎಂಬುದನ್ನು ಅಧಿಕೃತಗೊಳಿಸುವ ವೇದಿಕೆಯಾಗಿ ಪೋರ್ಟಲ್ ಕಾರ್ಯನಿರ್ವಹಿಸಲಿದೆ. ಎಲ್ಲ ರಾಜ್ಯಗಳ ಪ್ರತಿ ಜಿಲ್ಲಾ ಮಟ್ಟದಿಂದಲೂ ಮೀನುಕೃಷಿಕರು ಹೆಸರು ನೋಂದಾಯಿಸಿಕೊಳ್ಳುವಂತೆ ಉತ್ತೇಜಿಸಲು ಹಾಗೂ ಅವರಲ್ಲಿ ಜಾಗೃತಿ ಮೂಡಿಸುವಂತೆ ಮೀನುಗಾರಿಕೆ ಇಲಾಖೆಗೆ ಸುತ್ತೋಲೆ ಹೊರಡಿಸಿದೆ.

100 ರೂ.ಪ್ರೋತ್ಸಾಹ ಧನ

ಮೀನುಗಾರರ ನೋಂದಣಿ ಪ್ರಕ್ರಿಯೆ ಬಗ್ಗೆ ಹೆಚ್ಚು ಪ್ರಚಾರ ಮಾಡಲು ಸ್ವಯಂ ನೋಂದಣಿಯಾಗುವ ಮೀನು ಕೃಷಿಕರಿಗೆ 100 ರೂ. ಪ್ರೋತ್ಸಾಹ ಧನ ದೊರೆಯಲಿದೆ. ಗ್ರಾಮ ಒನ್ ಹಾಗೂ ಮತ್ತಿತರ ಸೇವಾ ಕೇಂದ್ರಗಳ ಮೂಲಕ ನೋಂದಣಿ ಮಾಡಿಕೊಂಡರೆ 80 ರೂ. ಮೀನುಗಾರರಿಗೆ, 20 ರೂ. ಕೇಂದ್ರಗಳಿಗೆ ಸಂದಾಯವಾಗಲಿದೆ. ನೋಂದಣಿ ಪ್ರಕ್ರಿಯೆಯನ್ನು ಆಯಾ ರಾಜ್ಯದಿಂದ ಅನುಮೋದನೆಗೊಳಿಸಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಇದರ ಪರಿಶೀಲನೆ ಬಳಿಕ ಕೇಂದ್ರ ಸರ್ಕಾರವು ಪ್ರೋತ್ಸಾಹ ಧನ ಸಂದಾಯ ಮಾಡಲಿದೆ.

ಎಲ್ಲದಕ್ಕೂ ಪ್ರಮಾಣ ಪತ್ರ ಮಾನದಂಡ

ಡಿಜಿಟಲ್ ನೋಂದಣಿ ಬಳಿಕ ಸರ್ಕಾರದ ಎಲ್ಲ ಯೋಜನೆಗಳಿಗೂ ಇದೇ ಪ್ರಮಾಣಪತ್ರವನ್ನು ಮಾನದಂಡವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಮೀನುಗಾರಿಕೆ ವೇಳೆ ಆಕಸ್ಮಿಕವಾಗಿ ಮೃತಪಟ್ಟರೆ ನೀಡುವ ಪರಿಹಾರ ಧನಕ್ಕೂ ಈ ಪ್ರಮಾಣಪತ್ರ ಅವಶ್ಯವಾಗಲಿದೆ. ಬಲೆ ನೇಯುವವರು, ಮೀನು ಹಿಡಿಯುವವರು, ಮೀನು ವ್ಯಾಪಾರಿಗಳು, ಸಾಗಣೆದಾರರು ಹೀಗೆ ಮೀನುಗಾರಿಕೆಗೆ ಸಂಬಂಧಪಟ್ಟ ಯಾವುದೇ ವೃತ್ತಿಮಾಡಿದರೂ ಅವರಿಗೆಲ್ಲ ಈ ಪ್ರಮಾಣಪತ್ರ ಅವಶ್ಯಕವಾಗಲಿದೆ. ಪ್ರಮಾಣಪತ್ರದ ಮೂಲಕ ಮೀನುಗಾರ ಎಂಬುದನ್ನು ಸರ್ಕಾರ ಸಮ್ಮತಿಸಲಿದೆ. ಜತೆಗೆ ಸರ್ಕಾ ರದ ಯೋಜನೆಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗಲಿದೆ.

ನೋಂದಣಿ ಮಾಡಿಕೊಳ್ಳುವುದು ಸುಲಭ

ಮೀನುಗಾರರು ಎನ್​ಎಫ್​ಡಿಪಿ ಪೋರ್ಟಲ್​ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಆಧಾರ್ ಹಾಗೂ ಮೊಬೈಲ್ ಸಂಖ್ಯೆಯನ್ನಷ್ಟೇ ನೋಂದಾಯಿಸಿಕೊಳ್ಳಬಹುದು. ಯಾವುದೇ ದಾಖಲೆಗಳನ್ನು ಸ್ಕಾ್ಯನ್ ಮಾಡುವ ಅವಶ್ಯಕತೆ ಇಲ್ಲ. ನೋಂದಣಿ ವೇಳೆ 2 ಒಟಿಪಿ ಬರಲಿದ್ದು, ಅವುಗಳ ಸಂಖ್ಯೆ ದಾಖಲಿಸಿ, ಆಧಾರ್​ಲಿಂಕ್ ಆಗಿರುವ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿದರೆ ಸಾಕು. ನೋಂದಣಿ ಯಶಸ್ವಿಯಾದ ಬಳಿಕ ಮೀನುಗಾರರಿಗೆ ಪ್ರತ್ಯೇಕ ಕೋಡ್ ಹಾಗೂ ನೋಂದಣಿಯಾದವರ ಭಾವಚಿತ್ರವಿರುವ ಪ್ರಮಾಣಪತ್ರ ದೊರೆಯುತ್ತದೆ.

ಕೃಷಿ ಹೊಂಡದವರಿಗೂ ಮಾನ್ಯತೆ

ಗ್ರಾಮೀಣ ಪ್ರದೇಶದ ಬಹುತೇಕ ರೈತರು ಕೃಷಿಹೊಂಡಗಳಲ್ಲಿ ಮೀನುಗಾರಿಕೆ ಮಾಡುತ್ತಿದ್ದು, ಅವರು ಮೀನುಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಆದರೆ ಇವರು ಮೀನುಗಾರರು ಎಂಬುದಕ್ಕೆ ದಾಖಲೆ ಇರುವುದಿಲ್ಲ. ಆದ್ದರಿಂದ ಪೋರ್ಟಲ್​ನಲ್ಲಿ ನೋಂದಣಿಯಾದರೆ ಮೀನುಗಾರರಿಗೆ ಸಿಗುವ ಸೌಲಭ್ಯಗಳು ಇವರಿಗೂ ಸಿಗುತ್ತವೆ. ಇದರಿಂದ ಸ್ಥಳೀಯ ಮೀನುಗಾರಿಕೆಗೆ ಉತ್ತೇಜನ ದೊರೆತಂತಾಗುತ್ತದೆ.

ಮೀನುಗಾರ ಎಂಬುದಕ್ಕೆ ಇದೊಂದು ಅಧಿಕೃತ ಸರ್ಕಾರಿ ದಾಖಲೆಯಾಗಲಿದೆ. ಈ ಮೂಲಕ ಎಷ್ಟು ಮಂದಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ನಿಖರ ಅಂಕಿ-ಅಂಶ ದೊರೆಯಲಿದೆ. ಅಲ್ಲದೆ ಸರ್ಕಾರ ಗಣತಿಯ ಆಧಾರದ ಮೇಲೆ ವಿವಿಧ ಯೋಜನೆಗಳನ್ನು ರೂಪಿಸಲು ಹಾಗೂ ಅರ್ಹರಿಗೆ ತಲುಪಿಸಲು ಸಹಕಾರಿಯಾಗಲಿದೆ. ಇದೊಂದು ಸರಳ ಪ್ರಕ್ರಿಯೆಯಾಗಿದ್ದು, ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಕಡ್ಡಾಯವಾಗಿ ನೋಂದಣಿಯಾಗಬೇಕು. | ಸುಬ್ರಹ್ಮಣ್ಯ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ ಬೆಂ.ಗ್ರಾಮಾಂತರ

ಕಿಸಾನ್ ಕ್ರೆಡಿಟ್​ಗೂ ಬೇಕು ಕಾರ್ಡ್

ಕೃಷಿಕರಿಗೆ ಕಡಿಮೆ ದರದಲ್ಲಿ ಸಾಲ-ಸೌಲಭ್ಯ ಒದಗಿಸುವ ಕಿಸಾನ್ ಕ್ರೆಡಿಟ್ ಯೋಜನೆಯನ್ನು ಮೀನುಗಾರರಿಗೂ ವಿಸ್ತರಿಸಿದ್ದು, ಅವರಿಗೂ ಕಿಸಾನ್ ಕ್ರೆಡಿಟ್ ಮೂಲಕ ಕಡಿಮೆ ದರದಲ್ಲಿ ಸಾಲ-ಸೌಲಭ್ಯ ಸಿಗಲಿದೆ. ಹಾಗಾಗಿ ಮೀನುಗಾರರು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಈ ಮೂಲಕ ಸ್ಥಳೀಯ ಬ್ಯಾಂಕ್​ಗಳಿಂದ ಸೌಲಭ್ಯ ಪಡೆಯಬಹುದಾಗಿದೆ.