ನ್ಯೂಸ್

ಶತಮಾನೋತ್ಸವ ಸಮಾರೋಪ ಸಮಾರಂಭ; ಕೆಎಎಸ್ ಅಧಿಕಾರಿಗಳ ಸಂಘದ ಕಲ್ಯಾಣ ನಿಧಿಗೆ ಪ್ರಿಯಾಂಕ ಖರ್ಗೆ ತಿಂಗಳ ವೇತನ

ಬೆಂಗಳೂರು:

ನಿಸ್ವಾರ್ಥ ಭಾವನೆಯಿಂದ ಜನರ ಸೇವೆಯನ್ನು ಮಾಡಿದಾಗ ಮಾತ್ರ ನಿಮ್ಮನ್ನು ಸಮಾಜ ದೀರ್ಘ ಕಾಲ ಸ್ಮರಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಕೆಎಎಸ್ ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಕ್ಕೆ ಹೆಸರು ಬರಬೇಕಾದರೆ ಅಧಿಕಾರಿಗಳ ಪ್ರಾಮಾಣಿಕತನ ಮತ್ತು ದಕ್ಷತೆಯೂ ಬಹಳ ಮುಖ್ಯ ಎಂದರು.

ಮಾನವೀಯ ನೆಲೆಯಲ್ಲಿ ನಿಂತು ಯೋಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ. ಎಲ್ಲವೂ ಕಾನೂನಿನಲ್ಲಿಯೇ ಪರಿಹಾರ ಸಾಧ್ಯವಿಲ್ಲ. ದೀನ ದಲಿತರ ಸೇವೆ ಮಾಡುವ ಸಂದರ್ಭದಲ್ಲಿ ನಿಮ್ಮ ಹೃದಯವಂತಿಕೆ ಮುಖ್ಯ ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಿದೆ ಎಂದು ಹೇಳಿದರು.

ತಿಂಗಳ ಸಂಬಳ ದೇಣಿಗೆಕರ್ನಾಟಕ ಆಡಳಿತ ಸೇವೆ ಶತಮಾನೋತ್ಸವದ ಅಂಗವಾಗಿ ಸಂಘದ ಕಲ್ಯಾಣ ನಿಧಿಗೆ ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ಕಳುಹಿಸಿಕೊಡುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಇದೇ ಸಂದರ್ಭದಲ್ಲಿ ತಿಳಿಸಿದರು.

ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಶಾಲಿನಿ ರಜನೀಶ್ ಅವರುಗಳು ಮಾತನಾಡಿ, ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇನ್ನಷ್ಟು ಸಾಂಕ ಚಟುವಟಿಕೆಗಳನ್ನು ನಡೆಸುವಂತೆ ತಿಳಿಸಿ ಶುಭ ಹಾರೈಸಿದರು.

ಸಂಘದ ರಾಜ್ಯಾಧ್ಯಕ್ಷ ಡಾ.ರವಿ ಎಂ.ತಿರ್ಲಾಪೂರ, ಪದಾಧಿಕಾರಿಗಳು ಹಾಜರಿದ್ದರು.