ನ್ಯೂಸ್

ಕೇರಳದಲ್ಲಿ ಲಂಚ ಪಡೆದ ಆರೋಪ;ವೈಟ್‌ಫೀಲ್ಡ್ ಸಿಇಎನ್ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಸೇವೆಯಿಂದ ಅಮಾನತು

ಬೆಂಗಳೂರು: ಸೈಬರ್ ಕ್ರೈಂ ತನಿಖೆ ವೇಳೆ ಶಂಕಿತರಿಂದ 3.90 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ವೈಟ್‌ಫೀಲ್ಡ್ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಸೇರಿ ನಾಲ್ವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.

ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಶಿವಪ್ರಕಾಶ್, ಹೆಡ್‌ಕಾನ್‌ಸ್ಟೆಬಲ್‌ಗಳಾದ ಶಿವಣ್ಣ, ವಿಜಯ್ಕುಮಾರ್ ಮತ್ತು ಕಾನ್‌ಸ್ಟೆಬಲ್ ಸಂದೇಶ್ ಅಮಾನತುಗೊಂಡವರು.

ಸ್‌ಟಾವೇರ್ ಉದ್ಯೋಗಿ ಶ್ರೀಕಾಂತ್ ಎಂಬಾತ 26 ಲಕ್ಷ ರೂ. ವಂಚನೆ ಆಗಿರುವುದಾಗಿ ಜೂನ್ 16ರಂದು ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ, ಮಡಿಕೇರಿ ಮೂಲದ ಐಸಾಕ್ ಎಂಬಾತನ ಬ್ಯಾಂಕ್ ಖಾತೆಗೆ 10 ಸಾವಿರ ರೂ. ಜಮೆ ಆಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಇದರ ಜಾಡು ಹಿಡಿದು ಐಸಾಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಜೇಶ್ ಎಂಬಾತನ ಪರವಾಗಿ ಖಾತೆ ತೆರೆದಿರುವುದಾಗಿ ಹೇಳಿದ್ದ. ಆತನ ವಿಚಾರಣೆ ವೇಳೆ ಕೇರಳ ಮೂಲದ ಪರೇಶ್ ಮತ್ತು ನಿಶಾಂತ್ ಹೆಸರು ಕೇಳಿಬಂದಿತ್ತು. ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಣಪ್ಪುರಂ ಮೂಲದ ನೌಶಾದ್ ಮತ್ತು ಈತನ ಸಹಚರಾದ ನಿಖಿಲ್, ಅಖಿಲ್ ಎಂಬುವರನ್ನು ಎರ್ನಾಕುಲಂನ ಪಲ್ಲುರ್ತಿಯಲ್ಲಿ ವಶಕ್ಕೆ ಪಡೆದಿದ್ದರು. ಬಳಿಕ ಬಿಡಲು 4 ಲಕ್ಷ ರೂ.ಗೆ ವೈಟ್‌ಫೀಲ್ಡ್ ಸಿಇಎನ್ ಪೊಲೀಸರು ಬೇಡಿಕೆ ಒಡ್ಡಿದ್ದರು.

ಅದರಲ್ಲಿ 3 ಲಕ್ಷ ರೂ. ನಗದು ಕೊಟ್ಟಿದ್ದರು. ಉಳಿದ 1 ಲಕ್ಷ ರೂ.ನಲ್ಲಿ 95 ಸಾವಿರ ರೂ. ಮತ್ತೊಬ್ಬ ಕೊಟ್ಟಿದ್ದ. ಉಳಿದ 5 ಸಾವಿರ ರೂ. ಪಡೆಯಲು ಕಾಯುತ್ತಿದ್ದರು. ಅಷ್ಟೊತ್ತಿಗೆ ಅಖಿಲ್ ಎಂಬಾತ ತಮ್ಮ ವಕೀಲರ ಮೂಲಕ ಕಲಂಸ್ಸೇರಿ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದ. ತಕ್ಷಣ ವೈಟ್‌ಫೀಲ್ಡ್ ಸಿಇನ್ ಠಾಣೆ ಪೊಲೀಸರನ್ನು ವಶಕ್ಕೆ ಪಡೆದು 10 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.

ಕೊನೆಗೆ ವಿಷಯ ತಿಳಿದ ವೈಟ್‌ಫೀಲ್ಡ್ ಡಿಸಿಪಿ ಎಸ್. ಗಿರೀಶ್ ಸೂಚನೆ ಮೇರೆಗೆ ಓರ್ವ ಎಸಿಪಿ ಕೇರಳಕ್ಕೆ ಕಳುಹಿಸಿ ಬಂಧಿತ ಪೊಲೀಸರನ್ನು ಬಿಡಿಸಿಕೊಂಡು ಬಂದಿದ್ದರು. ಎ್ಐಆರ್ ಆಗಿರುವ ಹಿನ್ನೆಲೆಯಲ್ಲಿ ಕೇರಳ ಪೊಲೀಸರು, ವೈಟ್‌ಫೀಲ್ಡ್ ಸಿಇಎನ್ ಪೊಲೀಸರಿಗೆ ನೋಟಿಸ್ ಕೊಟ್ಟು ಆಗಸ್ಟ್ 16ಕ್ಕೆ ವಿಚಾರಣೆಗೆ ಬರುವಂತೆ ಸೂಚನೆ ಕೊಟ್ಟು ಬಿಟ್ಟುಕಳುಹಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಬಿ.ದಯಾನಂದ್, ಲಂಚ ಪಡೆದ ಆರೋಪದ ಮೇಲೆ ನಾಲ್ವರು ಪೊಲೀಸರು ಸೇವೆಯಿಂದ ಅಮಾನತು ಮಾಡಿ ತನಿಖೆ ಆದೇಶಿಸಿದ್ದಾರೆ.