ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿ ಹೊಸದಾಗಿ ಕಟ್ಟಲಾಗಿದ್ದ ಏರ್ಪೋರ್ಟ್ನ ಒಂದು ಭಾಗ ಈಗಲೇ ಕುಸಿದುಬಿದ್ದಿದೆ. ಕಳೆದ ವಾರದಿಂದಲೂ ಸುರಿಯುತ್ತಿರುವ ಭರ್ಜರಿ ಮಳೆಯಿಂದಾಗಿ ಹೀಗಾಗಿದೆ ಎಂದು ಹೇಳಲಾಗುತ್ತಿದ್ದರೂ, ಪಾಕಿಸ್ತಾನ ವಾಯುಯಾನ ಪ್ರಾಧಿಕಾರ ಈ ಬಗ್ಗೆ ತನಿಖೆಗೆ ಸೂಚಿಸಿದೆ.
ಏರ್ಪೋರ್ಟ್ನ ನಿರ್ಗಮನ ದಿಕ್ಕಿನ ಕಡೆಯಲ್ಲಿ, ಸೀಲಿಂಗ್ ತುಂಡುತುಂಡಾಗಿ ಕೆಳಗೆ ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ. ಹೀಗೆ ಏಕಾಏಕಿ ಸೀಲಿಂಗ್ ಉದುರಿ ಬಿದ್ದಿದ್ದು ಆಗಸ್ಟ್ 14ರಂದು. ಅಂದು ಆ ಭಾಗದಲ್ಲಿ 56 ಎಂಎಂ ನಷ್ಟು ಮಳೆಯಾಗಿತ್ತು. ಒಂದು ವಾರದಿಂದಲೂ ಸತತವಾಗಿ ಮಳೆ ಬರುತ್ತಿದ್ದ ಕಾರಣ ಹೀಗಾಗಿದೆ ಎಂದು ವಿಭಾಗೀಯ ವಾಯುಯಾನ ಪ್ರಾಧಿಕಾರದ ವಕ್ತಾರ ತಿಳಿಸಿದ್ದಾರೆ.
ಇಸ್ಲಮಾಬಾದ್ನ ಈ ಏರ್ಪೋರ್ಟ್ ಎರಡು ವರ್ಷಗಳ ಹಿಂದಷ್ಟೇ ಕಟ್ಟಲ್ಪಟ್ಟಿತ್ತು. ಆದರೆ ಪ್ರತಿ ಮಳೆಗಾಲದಲ್ಲೂ ನೀರು ಒಳಗೆ ಸೋರುತ್ತಿತ್ತು. ಏರ್ಪೋರ್ಟ್ ನಿರ್ಮಾಣ ಸರಿಯಾಗಿ ಆಗಿಲ್ಲ. ತುಂಬ ದೋಷಯುಕ್ತವಾಗಿದೆ ಎಂದು ಈಗಾಗಲೇ ಆರೋಪ ಕೇಳಿಬಂದಿದ್ದು, ಅದಕ್ಕೆ ಸಂಬಂಧಪಟ್ಟ ವಿಚಾರಣೆಯೂ ನಡೆಯುತ್ತಿದೆ. ಆದರೆ ಈ ಮಳೆಗಾಲದಲ್ಲಿ ಏರ್ಪೋರ್ಟ್ ಸೀಲಿಂಗ್ ಉದುರಿ ಬಿದ್ದಿದೆ. ಅಲ್ಲಿಗೆ ಪಾಕ್ ವಾಯುಯಾನ ಸಚಿವರು ಶೀಘ್ರದಲ್ಲೇ ಅಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)