Israel Air strikes: ಇಸ್ರೇಲ್ ಮತ್ತು ಹಮಾಸ್ ಉಗ್ರ ಸಂಘಟನೆ ನಡುವಿನ ಕದನ ನಿಲ್ಲುವಂತೆ ಕಾಣುತ್ತಿಲ್ಲ. ಕದನ ವಿರಾಮ ಉಲ್ಲಂಘನೆ ಹಿನ್ನೆಲೆ ನಿನ್ನೆ ತಡರಾತ್ರಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಗಾಜಾ ಮೇಲೆ ಪ್ರಬಲ ದಾಳಿ ನಡೆಸುವಂತೆ ಆದೇಶಿಸಿದ ಹಿನ್ನೆಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಗಾಜಾದಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಬುಧವಾರ(ಅ. 29) ವರದಿಯಾಗಿದೆ.
ಗಾಜಾ ಕದನ ವಿರಾಮ ಜಾರಿಗೆ ಬಂದು ಮೂರು ವಾರಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಎರಡೂ ಕಡೆಯವರು ಪರಸ್ಪರ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಡರಾತ್ರಿ ಇಸ್ರೇಲ್ ಗಾಜಾ ಮೇಲೆ ಹೊಸ ದಾಳಿಗಳನ್ನು ಪ್ರಾರಂಭಿಸಿದೆ.
ಇನ್ನೂ ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಇಸ್ರೇಲ್ ಸೇನೆ, ತನ್ನ ಪಡೆಗಳ ಮೇಲೆ ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಪ್ಯಾಲೆಸ್ಟೀನಿಯನ್ ಗುಂಪು ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ದಕ್ಷಿಣ ಗಾಜಾದಲ್ಲಿ ಐಡಿಎಫ್ ಪಡೆಗಳ ಮೇಲೆ ನಡೆದ ದಾಳಿ ಬಳಿಕ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಲಾಗಿದೆ. ಒತ್ತೆಯಾಳುಗಳ ಬಿಡುಗಡೆ ಬಗ್ಗೆಯೂ ಗಾಜಾ ಒಪ್ಪಂದವನ್ನು ಹಮಾಸ್ ಸಂಘಟನೆ ಉಲ್ಲಂಘಿಸಿದೆ ಎಂದು ಇಸ್ರೇಲ್ ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಕದನ ಉಲ್ಲಂಘನೆ ಆರೋಪವನ್ನು ಉಗ್ರ ಹಮಾಸ್ ಸಂಘಟನೆ ನಿರಾಕರಿಸಿದ್ದು, ರಫಾದಲ್ಲಿ ನಡೆದ ಗುಂಡಿನ ದಾಳಿ ಘಟನೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ. (ಏಜೆನ್ಸೀಸ್)