ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇದಿನೆ ಹೊಸ ಹೊಸ ಬೆಳವಣಿಗೆಗಳು ಎದುರಾಗುತ್ತಿದೆ. ಇದೀಗ ಸುಶಾಂತ್ ಸಾವಿನ ದಿನವೇ ಅಪರಿಚಿತ ಯುವತಿಯೊಬ್ಬರ ಸಿಸಿಟಿವಿ ವಿಡಿಯೋ ಬಹಿರಂಗವಾಗಿದೆ.
ಜೂ. 14ರ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನ, ಆ್ಯಂಬುಲೆನ್ಸ್ ಮೂಲಕ ಶವವನ್ನು ಸಾಗಿಸುವ ವೇಳೆ ಸಿಸಿಟಿವಿಯಲ್ಲಿ ಯುವತಿಯ ದೃಶ್ಯಗಳು ಸೆರೆಯಾಗಿದ್ದು, ಆ ಯುವತಿ ಯಾರೆಂಬುದನ್ನು ಪತ್ತೆ ಹಚ್ಚುವ ಕಾರ್ಯ ಸಹ ನಡೆದಿದೆ. ಆದರೆ, ಇಲ್ಲಿಯವರೆಗೂ ಆ ಯುವತಿಯ ಬಗ್ಗೆ ವಿಚಾರಣೆ ನಡೆಸದಿರುವುದು ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಧೋರಣೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ಈಗಾಗಲೇ ಆ ಮಹಿಳೆ ರಿಯಾ ಚಕ್ರವರ್ತಿ ಸಹೋದರನ ಪ್ರೇಯಸಿ ಎಂಬ ಮಾತುಗಳು ಕೇಳಿಬಂದಿದ್ದು, ಪೊಲೀಸ್ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ‘62 ದಿನಗಳಾದರೂ ಮುಂಬೈ ಪೊಲೀಸ್ ಇಲಾಖೆ ಮಾತ್ರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾದ ಆ ಇಬ್ಬರು ವ್ಯಕ್ತಿಗಳು ಯಾರು ಎಂಬುದನ್ನು ಇನ್ನೂ ಪತ್ತೆ ಮಾಡಿಲ್ಲ’ ಎಂದಿದ್ದಾರೆ.
ಸದ್ಯ ಆ ಅನುಮಾನಾಸ್ಪದ ಯುವತಿಯ ಹೆಸರು ಜಮೀಲಾ ಎಂದು ಹೇಳಲಾಗುತ್ತಿದ್ದು, ರಿಯಾ ಸಹೋದರ ಶೌವಿಕ್ ಅವರ ಸ್ನೇಹಿತೆ. ಸುಶಾಂತ್ ಸಾವನ್ನಪ್ಪಿದ ದಿನವೇ, ಆತನ ಮೃತದೇಹವನ್ನು ಸಾಗಿಸುವಾಗಲೇ ಅಪಾರ್ಟ್ಮೆಂಟ್ ಬಳಿ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದಾರೆ. ಅಷ್ಟೇ ಅಲ್ಲ ಸುಶಾಂತ್ ಜತೆಗೂ ಅವರು ಕಾಣಿಸಿಕೊಂಡಿರುವ ಫೋಟೋ ಸಹ ವೈರಲ್ ಆಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. (ಏಜೆನ್ಸೀಸ್)
ಇದನ್ನೂ ಓದಿ: ಪ್ರಗುಣಿಯಲ್ಲಿ ಶಾರ್ಟ್ ಫಿಲ್ಮ್ ಫೆಸ್ಟಿವಲ್