ನ್ಯೂಸ್

ಫೆ. 23ರಿಂದ ಸಿಸಿಎಲ್ ಸೀಸನ್‌ 10: ಒಟ್ಟು ಎಷ್ಟು ತಂಡಗಳು? ಯಾವ ಸ್ಟಾರ್​​ಗಳು ಕ್ಯಾಪ್ಟನ್​? ಇಲ್ಲಿದೆ ವಿವರ

ಮುಂಬೈ: ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ (CCL) ಹತ್ತನೇ ಸೀಸನ್​ಗೆ ದಿನಗಣನೆ ಶುರುವಾಗಿದ್ದು, ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಇದಾಗಿದೆ. ನಾಲ್ಕು ವಾರಾಂತ್ಯಗಳಲ್ಲಿ ನಡೆಯಲಿರುವ ಸಿಸಿಎಲ್‌ 10ನೇ ಆವೃತ್ತಿಯಲ್ಲಿ ಒಟ್ಟು 20 ರೋಚಕ ಪಂದ್ಯಗಳು ನಡೆಯಲಿವೆ.

ಕ್ರಿಕೆಟ್‌ ಅಭಿಮಾನಿಗಳಷ್ಟೇ ಅಲ್ಲದೆ, ಸಿನಿಪ್ರಿಯರು ಕುತೂಹಲದಿಂದ ವೀಕ್ಷಿಸುವ ಈ ಕ್ರಿಕೆಟ್‌ ಲೀಗ್‌ ಅನ್ನು ವ್ಯಾಪಕವಾದ ಪ್ರೇಕ್ಷಕ ವರ್ಗಕ್ಕೆ ನೇರವಾಗಿ ತಲುಪಿಸಲು ಜಿಯೋ ಸಿನಿಮಾ ಕೂಡ ಸಜ್ಜಾಗಿದೆ. ಇದೇ ಫೆಬ್ರುವರಿ 23ರಿಂದ ಪಂದ್ಯಗಳು ಆರಂಭವಾಗಲಿದ್ದು, ಯಾರೆಲ್ಲಾ ಸ್ಟಾರ್​ ನಟರು ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದರ ವಿವರ ಹೀಗಿದೆ.

ಯಾವ್ಯಾವ ತಂಡಗಳು?: ಭಾರತದ ಎಂಟು ಮುಖ್ಯ ಚಿತ್ರರಂಗವನ್ನು ಪ್ರತಿನಿಧಿಸುವ ತಂಡಗಳು ಈ ಬಾರಿಯ ಸಿಸಿಎಲ್‌ನಲ್ಲಿ ಭಾಗವಹಿಸುತ್ತಿವೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮತ್ತು ಪಂಜಾಬ್‌ ತಂಡಗಳು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಸಿಸಿಎಲ್‌ ಸೀಸನ್‌ 10ರಲ್ಲಿ ವಿವಿಧ ಚಿತ್ರರಂಗಗಳ ಇನ್ನೂರಕ್ಕೂ ಅಧಿಕ ಜನಪ್ರಿಯ ತಾರೆಗಳು, ಗಣ್ಯರು ಜತೆಯಾಗಿ ಪ್ರೇಕ್ಷಕರಿಗೆ ಮನರಂಜನೆಯ ರಸದೂಟವನ್ನು ಉಣಿಸಲು ಸಿದ್ಧರಿದ್ದಾರೆ.

ಯಾವ ತಂಡಕ್ಕೆ ಯಾರು ನಾಯಕರು?: ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಮುಂಬೈ ಹೀರೋಸ್ ತಂಡಕ್ಕೆ ಸಲ್ಮಾನ್‌ ಖಾನ್‌ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ರಿತೇಶ್‌ ದೇಶಮುಖ್ ಈ ತಂಡದ ನಾಯಕ. ಸೋಹೈಲ್ ಖಾನ್, ಮುಂಬೈ ಹೀರೊಸ್ ಟೀಮ್​ನ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್‌’ ತಂಡಕ್ಕೆ ವೆಂಕಟೇಶ್‌ ಬ್ರಾಂಡ್ ಅಂಬಾಸಿಡರ್ ಆದರೆ, ಅಖಿಲ್ ಅಕ್ಕಿನೇನಿ ತಂಡದ ನಾಯಕ.

ಇನ್ನು ‘ಕರ್ನಾಟಕ ಬುಲ್ಡೋಜರ್ಸ್‌’ ತಂಡಕ್ಕೆ ಕಿಚ್ಚ ಸುದೀಪ್‌ ಕ್ಯಾಪ್ಟನ್​ ಆಗಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಅನ್ನು ಈಗಷ್ಟೇ ಮುಗಿಸಿರುವ ಸುದೀಪ್‌, ಮತ್ತೊಮ್ಮೆ ಸಿಸಿಎಲ್‌ 10 ಮೂಲಕ ಮತ್ತೊಮ್ಮೆ ರಂಜಿಸಲು ಸಜ್ಜಾಗಿದ್ದಾರೆ. ಮೋಹನ್ ಲಾಲ್‌ ಸಹ ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್‌’ ತಂಡಕ್ಕೆ ಇಂದ್ರಜಿತ್ ನಾಯಕರಾಗಿದ್ದಾರೆ. ‘ಭೋಜಪುರಿ ದಬಾಂಗ್ಸ್‌’ ತಂಡಕ್ಕೆ ಮನೋಜ್‌ ತಿವಾರಿ ನಾಯಕರಾಗಿದ್ದಾರೆ. ‘ಪಂಜಾಬ್‌ ದೆ ಶೇರ್’ ತಂಡಕ್ಕೆ ಸೋನು ಸೂದ್‌, ಬೋನಿ ಕಪೂರ್ ಮಾಲೀಕರಾಗಿರುವ ‘ಬೆಂಗಾಲ್ ಟೈಗರ್ಸ್‌’ ತಂಡಕ್ಕೆ ಜಿಸ್ಸು ಸೆನ್‌ಗುಪ್ತ ಕ್ಯಾಪ್ಟನ್ ಆಗಿದ್ದಾರೆ.