ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಶುಕ್ರವಾರ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದಿಢೀರ್ ಅಸ್ವಸ್ಥಳಾಗಿ ಕುಸಿದು ಬಿದ್ದಿದ್ದು ಆಕೆಯನ್ನು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉದ್ಯಮಿಗೆ ವಂಚನೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಗುರುವಾರ ಚೈತ್ರಾಳನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಚೈತ್ರಾ ಶುಕ್ರವಾರ ಬೆಳಗ್ಗೆ ಎದ್ದು ಒಂದು ಗಂಟೆ ಯೋಗ ಹಾಗೂ ಧ್ಯಾನ ಮಾಡಿದ್ದಳು. ಬಳಿಕ ಸಿಸಿಬಿ ಪೊಲೀಸರು ಆಕೆಯನ್ನು ಸಿಸಿಬಿ ಕಚೇರಿಗೆ ಕರೆತಂದಿದ್ದರು. ಕೆಲ ಸಮಯದ ಬಳಿಕ ಚೈತ್ರಾ ಮೂರ್ಚೆರೋಗ ಬಂದವರ ಹಾಗೆ ಏಕಾಏಕಿ ಅಸ್ವಸ್ಥಳಾಗಿ ಬಾಯಲ್ಲಿ ನೊರೆ ಕಕ್ಕಿಕೊಂಡು ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸಿಸಿಬಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ವೈದ್ಯರು ಚೈತ್ರಾಳನ್ನು ಎಲ್ಲಾ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲವೂ ನಾರ್ಮಲ್ ಇದೆ:
ಮೂರ್ಚೆ ರೋಗ ಬಂದಿದೆ ಎಂದು ಚೈತ್ರಾ ಕುಂದಾಪುರ ಎಂಬಾಕೆಯನ್ನು ಸಿಸಿಬಿ ಪೊಲೀಸರು ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಇಸಿಜಿ, ಬಿಪಿ, ಶುಗರ್ ಎಲ್ಲವೂ ನಾರ್ಮಲ್ ಇದೆ. ಸಿಟಿ ಸ್ಕ್ಯಾನ್ ಸೇರಿ ಎಲ್ಲಾ ಪರೀಕ್ಷೆ ಮಾಡಲಾಗಿದೆ. ಮೂರ್ಚೆ ರೋಗದಿಂದ ಆಕೆ ಕುಸಿದು ಬಿದ್ದಿಲ್ಲ. ಆರೋಗ್ಯ ಸ್ಥಿರವಾಗಿದ್ದು, ಟ್ರಾಮ ಮತ್ತು ತುರ್ತು ಆರೈಕೆ ವಿಭಾಗದ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಬಿಎಂಆರ್‌ಸಿಎಲ್ ಡೀನ್ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದಾರೆ.
ಚೈತ್ರಾ ಕುಂದಾಪುರಳಿಗೆ ಈ ಹಿಂದೆ ಮೂರ್ಚೆ ರೋಗ ಇತ್ತು. ಸಾರ್ವಜನಿಕ ಭಾಷಣದ ವೇಳೆ ಮೂರ್ಚೆ ಹೋಗಿದ್ದಳು ಎನ್ನಲಾಗಿದೆ. ಆದರೆ, ಸಿಸಿಬಿ ವಿಚಾರಣೆ ವೇಳೆ ಆಕೆಗೆ ಮೂರ್ಚೆ ಬಂದಿರಲಿಲ್ಲ. ಬದಲಾಗಿ ಆಕೆ ಮೂರ್ಚೆ ಹೋದಹಾಗೆ ನಾಟಕ ಮಾಡಿರುವ ಸಾಧ್ಯತೆಯಿದೆ. ಬಟ್ಟೆ ತೊಳೆಯುವ ಸಾಬೂನು ನೊರೆಯನ್ನು ಬಾಯಿಗೆ ಹಾಕಿದ ಶಂಕೆ ವ್ಯಕ್ತವಾಗಿದೆ. ಸಿಸಿಬಿ ಪೊಲೀಸರು ಶನಿವಾರ ಆಕೆಯ ಆರೋಗ್ಯ ಚೇತರಿಕೆ ನೋಡಿಕೊಂಡು ಮತ್ತೆ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಚೈತ್ರಾ ಆ್ಯಂಡ್ ಗ್ಯಾಂಗ್ ಹೈಡ್ರಾಮಾ ದೃಶ್ಯ ವೈರಲ್:
ಚೈತ್ರಾ ಕುಂದಾಪುರ ಮತ್ತು ಆಕೆಯ ಗ್ಯಾಂಗ್‌ನ ವಂಚನೆ ಪ್ರಕರಣ ಬಯಲಾದ ಬೆನ್ನಲ್ಲೇ ಈ ಹಿಂದೆ ಉದ್ಯಮಿ ಗೋವಿಂದಬಾಬು ಪೂಜಾರಿ ಜತೆಗೆ ಆರೋಪಿಗಳು ಮಾತುಕತೆಗೆ ಬಂದಿದ್ದರು. ಬಂಡೇಪಾಳ್ಯ ಠಾಣಾ ವ್ಯಾಪ್ತಿಯ ಗೋವಿಂದಬಾಬು ಪೂಜಾರಿ ಕಚೇರಿಗೆ ಕಳೆದ ಏಪ್ರಿಲ್ ೨೪ರಂದು ಆರೋಪಿಗಳಾದ ಚೈತ್ರಾ ಕುಂದಾಪುರ, ಗಗನ್ ಕಡೂರ್, ಪ್ರಸಾದ್ ಬೈಂದೂರು ಹಾಗೂ ಶ್ರೀಕಾಂತ್ ಬಂದಿದ್ದಾರೆ. ಈ ವೇಳೆ ಮಾತುಕತೆ ನಡೆಯುವಾಗ ಆರೋಪಿಗಳು ನೀವು ನೀಡಿದ ೩.೫೦ ಕೋಟಿ ರೂ. ಹಣವನ್ನು ವಿಶ್ವನಾಥ್ ಜೀಗೆ ನೀಡಲಾಗಿದೆ. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದಾರೆ. ಈ ವೇಳೆ ಗೋವಿಂದಬಾಬು ನಿಮ್ಮ ನಾಟಕ ಎಲ್ಲಾ ನನಗೆ ಗೊತ್ತಾಗಿದೆ ಎಂದು ಗದರಿದಾಗ, ಆರೋಪಿ ಗಗನ್ ಕಡೂರು ಏಕಾಏಕಿ ವಿಷದ ಬಾಟಲಿ ತೆಗೆದು ಕುಡಿಯಲು ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಬಳಿಕ ಆ ಬಾಟಲಿಯನ್ನು ಕಿತ್ತು ಎಸೆಯಲಾಗಿದೆ. ಈ ಹೈ ಡ್ರಾಮಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಆ ವಿಡಿಯೊ ಹೊರಬಿದ್ದಿದೆ.