ಬೆಂಗಳೂರು: ವ್ಯಾಪಾರಿಗಳಿಗೆ ಸಾಲ ಕೊಟ್ಟು ಅಧಿಕ ಬಡ್ಡಿಗಾಗಿ ಪೀಡಿಸುತ್ತಿದ್ದ ಲೇವಾದೇವಿಗಾರನ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಲ್ಲೇಶ್ವರದ ನಾಗರಾಜ್ ಶೆಟ್ಟಿ (52) ಬಂಧಿತ. ದಾಳಿ ವೇಳೆ 22 ಲಕ್ಷ ರೂ. ನಗದು, ಸಾರ್ವಜನಿಕರ 164 ಬ್ಲಾಂಕ್ ಚೆಕ್ ಹಾಗೂ ಆಸ್ತಿ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಫೈನಾನ್ಸ್ ವ್ಯವಹಾರ ಮಾಡಿಕೊಂಡಿರುವ ನಾಗರಾಜ್ ಶೆಟ್ಟಿ, ಮಲ್ಲೇಶ್ವರದ 10ನೇ ಕ್ರಾಸ್ನಲ್ಲಿ ಬಾಲಾಜಿ ಫೈನಾನ್ಸ್ ಕಚೇರಿ ಹೊಂದಿದ್ದು, ಮಲ್ಲೇಶ್ವರ, ವೈಯಾಲಿಕಾವಲ್ ವ್ಯಾಪ್ತಿಯಲ್ಲಿನ ವ್ಯಾಪಾರಿಗಳಿಗೆ ಸಾಲ ನೀಡುತ್ತಿದ್ದ. ಅದಕ್ಕೆ ಆಸ್ತಿ ದಾಖಲಾತಿ, ಸಹಿ ಮಾಡಿದ ಖಾಲಿ ಚೆಕ್ ಹಾಗೂ ಇನ್ನಿತರೆ ದಾಖಲಾತಿಗಳನ್ನು ಪಡೆಯುತ್ತಿದ್ದ. ಮಾಸಿಕ ಶೇ. 6 ಬಡ್ಡಿ ಹಣ ಹಿಡಿದಿಟ್ಟುಕೊಂಡು ಸಾಲ ನೀಡುತ್ತಿದ್ದ.
ಮಲ್ಲೇಶ್ವರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವ ಸುನೀಲ್ಕುಮಾರ್ ಎಂಬಾತ 2017ರಲ್ಲಿ ನಾಗರಾಜ್ ಶೆಟ್ಟಿ ಬಳಿ 5 ಲಕ್ಷ ರೂ. ಸಾಲ ಪಡೆದು ಅದನ್ನು ತೀರಿಸಿದ್ದ. ಕೆಲ ತಿಂಗಳ ಹಿಂದೆ ಮತ್ತೆ ಲಕ್ಷಾಂತರ ರೂ. ಸಾಲ ಪಡೆದಿದ್ದ. ಲಾಕ್ಡೌನ್ ಆಗಿದ್ದರಿಂದ ವ್ಯಾಪಾರದಲ್ಲಿ ನಷ್ಟವಾಗಿ ಸಾಲದ ಕಂತು ಕಟ್ಟಲು ಆಗಿರಲಿಲ್ಲ. ಸಾಲ ನವೀಕರಣದ ಮಾಡಿಕೊಡುವುದಾಗಿ ಹೇಳಿದ್ದ ನಾಗರಾಜ್, ಚಕ್ರಬಡ್ಡಿ ಸೇರಿಸಿ ಸಾಲದ ಲೆಕ್ಕ ತೋರಿಸಿದ್ದ. ಕೆಲ ದಿನಗಳಿಂದ ಸುನೀಲ್ ಮನೆ ಬಳಿಗೆ ಹೋಗಿ ಸಾಲದ ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದ. ಸಾಲ ತೀರಿಸದಿದ್ದರೆ ರೌಡಿಗಳನ್ನು ಬಿಟ್ಟು ಮುಗಿಸುವುದಾಗಿ ಬೆದರಿಕೆ ಹಾಕಿದ್ದ.
ಇದೇ ವೇಳೆ ಆಸ್ತಿ ದಾಖಲೆ ಹಾಗೂ ಸಹಿ ಮಾಡಿದ ಖಾಲಿ ಚೆಕ್ ಪಡೆದಿದ್ದ. ಈ ಬಗ್ಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ನಿಂದ ಅನುಮತಿ ಪಡೆದು ಶನಿವಾರ ತಡರಾತ್ರಿ ನಾಗರಾಜ್ ಶೆಟ್ಟಿ ಮನೆ ಮೇಲೆ ದಾಳಿ ನಡೆಸಿದಾಗ, ಸಾರ್ವಜನಿಕರ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.