ನವದೆಹಲಿ: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಈ ವಾರಾಂತ್ಯದೊಳಗೆ ಬರುತ್ತದೆ ಎಂದು ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಮಂಡಳಿ ಒಂದು ಮಾಹಿತಿ ನೀಡಿದೆ. ವಿದ್ಯಾರ್ಥಿಗಳ ಅಂಕ ಸಲ್ಲಿಕೆಯಲ್ಲಿ ಶಾಲೆಗಳು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಈ ವಾರದಲ್ಲಿ ಫಲಿತಾಂಶ ಪ್ರಕಟ ಮಾಡಲಾಗುವುದಿಲ್ಲ ಎಂದು ಹೇಳಲಾಗಿದೆ.
ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳ ಅಂಕವನ್ನು ಶಾಲೆಗಳು ಸಲ್ಲಿಸಬೇಕಿತ್ತು. ಆದರೆ ಕೆಲವು ಶಾಲೆಗಳು ಅಂಕ ಸಲ್ಲಿಕೆ ಮಾಡುವಲ್ಲಿ ವಿಳಂಬ ಮಾಡಿವೆ. ಆ ಕಾರಣ ಜುಲೈ 15ರ ಒಳಗೆ ಫಲಿತಾಂಶ ಪ್ರಕಟಿಸುವುದು ಸಾಧ್ಯವಿಲ್ಲ ಎಂದು ಸಿಬಿಎಸ್‌ಇ ಪರೀಕ್ಷೆಗಳ ನಿಯಂತ್ರಕ ಸನ್ಯಂ ಭರದ್ವಾಜ್ ತಿಳಿಸಿದ್ದಾರೆ. ಅಂಕ ಸಲ್ಲಿಕೆಯಲ್ಲಿ ವಿಳಂಬ ಮಾಡಿರುವ ಶಾಲೆಗಳಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಹಾಗಾಗಿ ಈ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗದು. ಜುಲೈ 31ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. 2020ರಲ್ಲಿ ಜುಲೈ 15ರಂದು ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿತ್ತು. (ಏಜೆನ್ಸೀಸ್)