ನ್ಯೂಸ್

ವರ್ಷಕ್ಕೆರಡು ಬಾರಿ ಸಿಬಿಎಸ್​ಇ ಪರೀಕ್ಷೆ; 2024-25ರಿಂದ ಅನುಷ್ಠಾನ

Bengaluru - General - Rama Kishan K V

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​ಇ) ವರ್ಷಕ್ಕೆ ಎರಡು ಬಾರಿ ಮಂಡಳಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. 2024-25ನೇ ಶೈಕ್ಷಣಿಕ ವರ್ಷದಿಂದ ಈ ಪದ್ಧತಿ ಅನುಷ್ಠಾನಕ್ಕೆ ಬರಲಿದೆ. 2024-25ರಲ್ಲಿ 10 ಮತ್ತು 12ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು ಈ ನಿಯಮದ ಲಾಭ ಪಡೆಯುವ ಮೊದಲ ಬ್ಯಾಚ್​ನವರಾಗಲಿದ್ದಾರೆ.

ಒಂದೇ ಬಾರಿ ನಡೆಯುವ ಪರೀಕ್ಷೆಯಿಂದಾಗಿ ಅವಕಾಶ ತಪ್ಪಿ ಹೋಗುವ ಚಿಂತೆಯಿಂದ ವಿದ್ಯಾರ್ಥಿಗಳ ಮೇಲಾಗುವ ಪರೀಕ್ಷಾ ಒತ್ತಡವನ್ನು ನಿವಾರಿಸುವ ಉದ್ದೇಶದಿಂದ ಬಹು&ಪರೀಾ ಪದ್ಧತಿಯನ್ನು ಅಳವಡಿಸಲು ಮಂಡಳಿ ಮುಂದಾಗಿದೆ. ಮೊದಲ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಬಗ್ಗೆ ಸಮಾಧಾನವಿರುವ ಅಭ್ಯರ್ಥಿ ಎರಡನೇ ಸಲದ ಪರೀಕ್ಷೆಯನ್ನು ಬರೆಯುವ ಅಗತ್ಯ ಇರುವುದಿಲ್ಲ. ಅದು ವಿದ್ಯಾರ್ಥಿಗೇ ಬಿಟ್ಟ ಆಯ್ಕೆಯಾಗಿದೆ. ಒಂದು ವೇಳೆ ಮೊದಲ ಪರೀಕ್ಷೆಯ ಸಾಧನೆ ಬಗ್ಗೆ ತೃಪ್ತಿಯಿಲ್ಲದವರು ಎರಡನೇ ಪರೀಕ್ಷೆಗೆ ಕುಳಿತುಕೊಳ್ಳಬಹುದಾಗಿದೆ.

ಎನ್​ಇಪಿ ಪಠ್ಯಕ್ರಮ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್​ ಅಧ್ಯಕ್ಷತೆಯಲ್ಲಿ ರಚಿಸಲಾದ ರಾಷ್ಟ್ರೀಯ ಚಾಲನಾ ಸಮಿತಿಯೊಂದು 2020ರ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್​ಇಪಿ) ಅನುಗುಣವಾಗಿ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರೂಪಿಸಿದೆ. 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್​ ವ್ಯವಸ್ಥೆಯನ್ನು ಈ ಪಠ್ಯಕ್ರಮ ಸಲಹೆ ಮಾಡಿದೆ. ಇದಲ್ಲದೆ, ಅಭ್ಯರ್ಥಿಗಳು ವರ್ಷಕ್ಕೆ ಎರಡು ಬಾರಿ ಬೋರ್ಡ್​ ಪರೀಕ್ಷೆಗಳನ್ನು ಬರೆಯುವ ಆಯ್ಕೆಯನ್ನು ಮಂಡಳಿ ಕಳೆದ ವರ್ಷ ಆಗಸ್ಟ್​ನಲ್ಲಿ ಸಲಹೆ ಮಾಡಿತ್ತು.