ನ್ಯೂಸ್

ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟ: ವಿಜಯವಾಡ ಪ್ರಥಮ, ಬೆಂಗಳೂರಿಗೆ 4ನೇ ಸ್ಥಾನ! CBSE Class 12 Result 2025

CBSE Class 12 Result 2025 : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಇಂದು (ಮೇ 13) 12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ 88.39 ರಷ್ಟು ಫಲಿತಾಂಶ ಬಂದಿದ್ದು, ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಶೇ. 99.60 ರಷ್ಟು ಫಲಿತಾಂಶದೊಂದಿಗೆ ಆಂಧ್ರ ಪ್ರದೇಶದ ವಿಜಯವಾಡ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ರಾಜಧಾನಿ ಬೆಂಗಳೂರು ಶೇ.95.95 ಫಲಿತಾಂಶದೊಂದಿಗೆ 4ನೇ ಸ್ಥಾನವನ್ನು ಗಳಿಸಿದೆ. ಕೇರಳದ ತ್ರಿವೆಂಡ್ರಮ್ ಶೇ. 99.32 ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಶೇ. 97.39 ಫಲಿತಾಂಶದೊಂದಿಗೆ ಚೆನ್ನೈ 3ನೇ ಸ್ಥಾನದಲ್ಲಿದೆ. ಮೊದಲ ನಾಲ್ಕು ಸ್ಥಾನವನ್ನು ದಕ್ಷಿಣದ ಕೇಂದ್ರಗಳೇ ತೆಗೆದುಕೊಂಡಿರುವುದು ಈ ಬಾರಿಯ ವಿಶೇಷವಾಗಿದೆ.

ಬಾಲಕಿಯರೇ ಮೇಲುಗೈ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶದಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಹುಡುಗರಿಗಿಂತ ಹುಡುಗಿಯರು ಶೇ. 5.94 ರಷ್ಟು ಹೆಚ್ಚು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಹುಡುಗಿಯರು ಶೇ. 91.64 ಮತ್ತು ಹುಡುಗರು ಶೇ. 85.70 ರಷ್ಟು ಉತ್ತೀರ್ಣರಾಗಿದ್ದಾರೆ. ಟ್ರಾನ್ಸ್‌ಜೆಂಡರ್‌ಗಳು ಶೇ. 100 ರಷ್ಟು ಉತ್ತೀರ್ಣರಾಗಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಹುಡುಗರು, ಹುಡುಗಿಯರು ಮತ್ತು ಟ್ರಾನ್ಸ್‌ಜೆಂಡರ್‌ಗಳ ಉತ್ತೀರ್ಣ ಶೇಕಡಾವಾರು ಹೆಚ್ಚಾಗಿದೆ.

2024 ರಲ್ಲಿ ಹುಡುಗಿಯರು ಶೇ. 91.52, ಹುಡುಗರು ಶೇ. 85.12 ಮತ್ತು ಟ್ರಾನ್ಸ್‌ಜೆಂಡರ್‌ಗಳು ಶೇ. 50 ರಷ್ಟು ಉತ್ತೀರ್ಣರಾಗಿದ್ದರು. 10ನೇ ತರಗತಿಯ ಫಲಿತಾಂಶಗಳು ಇಂದು ತಡವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. (ಏಜೆನ್ಸೀಸ್​)