ನವದೆಹಲಿ: ಕರೊನಾ ಕಾರಣದಿಂದ ಶೈಕ್ಷಣಿಕ ವರ್ಷದ ಚಟುವಟಿಕೆಯಲ್ಲಿ ವ್ಯತ್ಯಯವಾದ ಕಾರಣ 2020-21ನೇ ಸಾಲಿನ ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿರುವ ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ಇ) ಮತ್ತು ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಐಎಸ್ಸಿಇ) ಕೆಲ ತರಗತಿಗಳ ಪಠ್ಯಕ್ರಮವನ್ನು ತಗ್ಗಿಸಿವೆ. ಸಿಬಿಎಸ್ಇ 9ರಿಂದ 12ನೇ ತರಗತಿ ಪಠ್ಯಕ್ರಮವನ್ನು ಶೇ. 30ರವರೆಗೆ ಕಡಿತಗೊಳಿಸಲು ತೀರ್ಮಾನಿಸಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ, ದೈಹಿಕ ಜ್ಞಾನಾರ್ಜನೆಗೆ ಅಗತ್ಯ ವಾದಷ್ಟು ಪಠ್ಯ ಇಟ್ಟು ಶೈಕ್ಷಣಿಕ ವರ್ಷ ಮುಗಿಸಲಾಗುವುದೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ. ಸಿಐಎಸ್ಸಿಇ ಕೂಡ ಐಸಿಎಸ್ಇ ಮತ್ತು ಐಎಸ್ಸಿಗಳ ಎಲ್ಲ ಪ್ರಮುಖ ವಿಷಯಗಳಲ್ಲಿ ಶೇ. 25 ಪಠ್ಯವನ್ನು ಕಡಿತ ಮಾಡುವುದಾಗಿ ಹೇಳಿದೆ.