ಬೆಂಗಳೂರು: ಸಿಬಿಐ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಗಂಗಾನಗರದ ಕಚೇರಿಗೆ ಹಾಜರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸತತ ಒಂದು ಗಂಟೆ ಕಾಲ ವಿಚಾರಣೆ ಎದುರಿಸಿ ಹೊರ ಬಂದರು.
ಅಕ್ಟೋಬರ್ 5ರಂದು ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು, ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. 74.93 ಕೋಟಿ ರೂ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಡಿಕೆಶಿ ಮೇಲಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗಲು ನ.19ರಂದು ಡಿಕೆಶಿಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 3.55ಕ್ಕೆ ಸಿಬಿಐ ಕಚೇರಿಗೆ ಡಿಕೆಶಿ ಆಗಮಿಸಿದ್ದರಾದರೂ, ಕಾಂಗ್ರೆಸ್ ಪ್ರಭಾವಿ ನಾಯಕ ಅಹ್ಮದ್ ಪಟೇಲ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಹಾಗಾಗಿ ಹೋಗಲು ಅವಕಾಶ ಕೊಡಿ ಎಂದ ಸಿಬಿಐ ಅಧಿಕಾರಿಗಳಿಗೆ ಡಿಕೆಶಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಡಿಕೆಶಿಯನ್ನು ಒಂದು ತಾಸು ಮಾತ್ರವೇ ವಿಚಾರಣೆ ನಡೆಸಿ ಕಳುಸಿಕೊಟ್ಟರು.
71 ವರ್ಷ ವಯಸ್ಸಿನ ಅಹ್ಮದ್ ಪಟೇಲ್ ಅವರಿಗೆ ಕಳೆದ ತಿಂಗಳು ಕೋವಿಡ್ ಸೋಂಕು ತಗುಲಿತ್ತು. ಬಹು ಅಂಗಾಂಗ ವೈಫಲ್ಯದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಬುಧವಾರ ನಸುಕಿನಲ್ಲಿ ವಿಧಿವಶರಾದರು.