ನ್ಯೂಸ್

ಆರ್​ಜಿ ಕರ್​​ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ 8 ದಿನ ಸಿಬಿಐ ಕಸ್ಟಡಿಗೆ

ಕೋಲ್ಕತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರ ಮೂವರನ್ನು ಮಂಗಳವಾರ (ಸೆಪ್ಟೆಂಬರ್​ 3) ಸಿಬಿಐ ವಿಶೇಷ ನ್ಯಾಯಾಲಯವು 8 ದಿನಗಳ ಸಿಬಿಐ ಕಸ್ಟಡಿಗೆ ಕಳುಹಿಸಿದೆ. ಕಾಲೇಜಿನಲ್ಲಿ ಹಣಕಾಸು ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಸಂದೀಪ್​ ಘೋಷ್​ ಬಂಧಿತರಾಗಿದ್ದಾರೆ.

ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಯಿಂದ ಸಂದೀಪ್​​ ಘೋಷ್ ಅವರನ್ನು ಅಲಿಪುರದ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಿಬಿಐ 10 ದಿನಗಳು ಕಸ್ಟಡಿಗೆ ನೀಡುವಂತೆ ಕೋರಿತ್ತು. ನಾವು ಕೇವಲ ನಾಲ್ಕು ಜನರನ್ನು ಬಂಧಿಸಿದ್ದೇವೆ. ಇಲ್ಲಿ ದೊಡ್ಡ ಅವ್ಯವಹಾರ ನಡೆದಿದೆ. ಅದನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು ವಿಚಾರಣೆಗಾಗಿ ಅವರ ಕಸ್ಟಡಿ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಘೋಷ್ ಬಂಧನದ ಒಂದು ಗಂಟೆಯ ನಂತರ ಸಿಬಿಐ ಅಧಿಕಾರಿಗಳು ಆಗಸ್ಟ್ 9ರಂದು ಮಹಿಳಾ ವೈದ್ಯೆಯ ಶವ ಪತ್ತೆಯಾದ ಆಸ್ಪತ್ರೆಗೆ ಸಾಮಗ್ರಿಗಳನ್ನು ಪೂರೈಸುತ್ತಿದ್ದ ಅವರ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಮಾರಾಟಗಾರರನ್ನು ಬಂಧಿಸಿದ್ದಾರೆ. ಘೋಷ್ ಅವರ ಭದ್ರತಾ ಸಿಬ್ಬಂದಿ ಅಫ್ಸರ್ ಅಲಿ (44), ಮಾರಾಟಗಾರರಾದ ಬಿಪ್ಲವ್ ಸಿಂಘಾ (52) ಮತ್ತು ಸುಮನ್ ಹಜಾರಾ (46) ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದು ಆಗಸ್ಟ್ 9ರಿಂದ ಆಸ್ಪತ್ರೆಯಲ್ಲಿ ನಡೆದ ಎರಡನೇ ಬಂಧನವಾಗಿದೆ. ಇದಕ್ಕೂ ಮೊದಲು ನಾಗರಿಕ ಸ್ವಯಂಸೇವಕ ಸಂಜೋಯ್ ರಾಯ್ ಅವರನ್ನು ಕೋಲ್ಕತಾ ಪೊಲೀಸರು ಬಂಧಿಸಿ ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸಿದ್ದರು. ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಆರೋಪದ ಹಣಕಾಸು ಅಕ್ರಮಗಳ ತನಿಖೆಯನ್ನು ರಾಜ್ಯ ರಚಿಸಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ಆಗಸ್ಟ್ 23ರಂದು ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿತು.

ಮಾಜಿ ಉಪಅಧೀಕ್ಷಕ ಡಾ.ಅಖ್ತರ್ ಅಲಿ ಅವರು ಘೋಷ್​​ ಅವರ ಅಧಿಕಾರಾವಧಿಯಲ್ಲಿ ಸರ್ಕಾರಿ ಸಂಸ್ಥೆಯಲ್ಲಿ ನಡೆದ ಆಪಾದಿತ ಹಣಕಾಸಿನ ದುರುಪಯೋಗದ ಕುರಿತು ಜಾರಿ ನಿರ್ದೇಶನಾಲಯದಿಂದ (ಇಡಿ) ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯದಿಂದ ಈ ನಿರ್ದೇಶನ ಬಂದಿತು.(ಏಜೆನ್ಸೀಸ್​​)