ನ್ಯೂಸ್

ತನಿಖೆಗೆ ಹೆದರುವುದಿಲ್ಲ ಎನ್ನುವ ಸಿಎಂಗೆ ಸಿಬಿಐ ತನಿಖೆ ಭಯವೇಕೆ?

Bengaluru - Political - Shivananda Tagadur

ಬೆಂಗಳೂರು:
ತನಿಖೆಗೆ ಹೆದರುವುದಿಲ್ಲ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಅವರು, ಸಿಬಿಐಗೆ ಮುಕ್ತ ಅವಕಾಶವನ್ನು ರದ್ದು ಮಾಡಿ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದು ಏಕೆ? ಎಂದು ರಾಜ್ಯದ ಜನರಿಗೆ ಉತ್ತರಿಸಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ತಾವು ನೇಮಿಸಿದ ಮುಖ್ಯ ಕಾರ್ಯದರ್ಶಿಯನ್ನೆ ನಂಬದೆ ಅನುಮಾನದಿಂದ ನೋಡುತ್ತಿದ್ದೀರಿ ಎಂದರೆ, ನಿಮ್ಮ ಡಿಜಿಪಿ ಮೇಲೆಯೂ ನಿಮಗೆ ನಂಬಿಕೆ ಇಲ್ಲವಾಗಿದೆ ಎಂದರ್ಥ. ನಂಬಿಕೆ ಇಲ್ಲದ ಮೇಲೆ ಆಡಳಿತ ಹೇಗೆ ಮಾಡುತ್ತೀರಿ ಎಂದು ಕೇಳಿದರು.
ರಾಜ್ಯಪಾಲರಿಗೆ ಮುಖ್ಯ ಕಾರ್ಯದರ್ಶಿಯೂ ಉತ್ತರ ಕೊಡುವಂತಿಲ್ಲ. ಸಂಪುಟ ಮೂಲಕ ಹೋಗಬೇಕು ಎಂದು ನಿರ್ಧರಿಸಿರುವುದು ಕಾಂಗ್ರೆಸ್ ಪ್ರಜಾಪ್ರಭುತ್ವನಾ? ನಿಮಗೆ ಯಾಕೆ ಈ ಭಯ, ಆತಂಕ? ಯಾಕೆ ಈ ತಡೆಗೋಡೆ ಮಾಡುತ್ತಿದ್ದೀರಿ? ಎಂದು ವಾಗ್ದಾಳಿ ನಡೆಸಿದರು.
ತಮ್ಮ ಹಿರಿತನ, ಅನುಭವಕ್ಕೆ ಅವರೇ ಮಸಿ ಬಳಿದುಕೊಂಡಿದ್ದಾರೆ. ಮಸಿ ಬಳಿದುಕೊಂಡು ಮಸಿ ಇಲ್ಲ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರ ವಿರುದ್ಧ ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಸಂಬಂಧ ರಾಜ್ಯ ಸರ್ಕಾರವೂ ಅನುಮತಿ ಕೊಟ್ಟಿದೆ. ಇದನ್ನೂ ಹಿಂಪಡೆಯುವುದಾಗಿ ಹೇಳಿದ್ದಾರೆ. ಏನೇನು ಗೋಲ್ಮಾಲ್ ಮಾಡಿದ್ದೀರಿ? ಇಷ್ಟು ಆತಂಕ, ಭಯವೇಕೆ ಎಂದು ಕೇಳಿದರು.
ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾದಲ್ಲಿ ಸಿಬಿಐ ತನಿಖೆಯಾದರೆ ತಮಗೆ ಕಷ್ಟವೆಂದು ತಿಳಿದು ಅದನ್ನು ತಡೆಯಲು ಮುಂದಾದಂತಿದೆ ಎಂದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ.
ಮುಡಾದಲ್ಲಿ ತಾವು ಸತ್ಯ ಹರಿಶ್ಚಂದ್ರರು ಎನ್ನುತ್ತಿದ್ದರು. ಕೋರ್ಟ್‌ನಲ್ಲಿ ಏನೇನಾಗಿದೆ ಎಲ್ಲವೂ ಬೆಳಕಿಗೆ ಬಂದಿದೆ. ಮೂಡಾದಲ್ಲಿ ಸಿದ್ದರಾಮಯ್ಯ ಕುಟುಂಬದ ಅವ್ಯವಹಾರದ ವಿಷಯ ಎಲ್ಲ ಬಯಲಾಗಿದೆ ಎಂದರು.
ತಮಗೆ ಬೇಕಾದಂತೆ ಕಾನೂನು ತಿದ್ದುಪಡಿ ಮಾಡಿ, ಶೇ 50-50 ನಿವೇಶನ ಅನುಪಾತ ಮಾಡಿ ನಿವೇಶನಗಳನ್ನು ಕೊಳ್ಳೆ ಹೊಡೆಯಲಾಗಿದೆ. ಇದರ ಲೆಕ್ಕ ಕೇಳಿದರೆ ಲೆಕ್ಕ ಕೊಡುವುದಿಲ್ಲ. ನೋಟೀಸ್ ನೀಡಿದ ರಾಜ್ಯಪಾಲರನ್ನು ಇಲ್ಲಸಲ್ಲದ ಆಪಾದನೆ ಮಾಡಿ ದೂರಿದ್ದು ಸರಿಯಲ್ಲ ಎಂದು ಟೀಕಿಸಿದರು.
ಭ್ರಷ್ಟಾಚಾರದ ವಿರೋಧಿಗಳು, ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವವರೆಂದು ಕಪಟ ನಾಟಕ ಮಾಡುವ ಕಪಟಿಗಳಾದ ಕಾಂಗ್ರೆಸ್ಸಿಗರು, ಸಂವಿಧಾನದ ವಿರೋಧಿಗಳು ಎಂದು ದೂರಿದರು.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ನಿರಂತವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದ ಉದ್ದಗಲಕ್ಕೂ ನಾಗರಿಕರು, ರೈತರು ಮತ್ತು ಅಧಿಕಾರಿಗಳ ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದು ಟೀಕಿಸಿದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಸಿದ್ದರಾಮಯ್ಯನವರ ಈಗಿನ ನಡವಳಿಕೆಯು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರ ಎಂದು ತಿಳಿಸಿದರು.
40 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ದಾಖಲೆ ಸಮೇತ ಸಿಕ್ಕಿ ಬಿದ್ದಿರುವುದು ಇದು ಪ್ರಥಮ. ಹಿಂದಿನ ಅವಧಿಯಲ್ಲಿ ಅವರ ವಿರುದ್ಧ ಸುಮಾರು 40ಕ್ಕೂ ಹೆಚ್ಚು ಆರೋಪಗಳಿದ್ದವು. ಅವಾಗ ಎಸಿಬಿ ಮಾಡಿ ಎಲ್ಲ ಪ್ರಕರಣಗಳನ್ನು ಮುಚ್ಚಿದ್ದರು. ಹಗರಣಗಳೆಲ್ಲವನ್ನೂ ಮುಚ್ಚಿ ಹಾಕಲು ಅವರು ಲೋಕಾಯುಕ್ತವನ್ನೇ ಮುಚ್ಚಿಸಿದ್ದರು ಎಂದು ಟೀಕಿಸಿದರು.
ಬಿಜೆಪಿ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ, ಕಾನೂನು ಪ್ರಕೋಷ್ಠದ ಸಂಚಾಲಕ ವಸಂತಕುಮಾರ್, ಬಿಜೆಪಿ ಮುಖಂಡ ಜಗದೀಶ ಹಿರೇಮನಿ ಭಾಗವಹಿಸಿದ್ದರು.