ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್ ಪಡೆಯಲು ಸಚಿವ ಸಂಪುಟ ಸಭೆ ಕೈಗೊಂಡ ನಿರ್ಣಯ ಮುಂದಿಟ್ಟುಕೊಂಡು ಸರ್ಕಾರದ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಸಮರ್ಥಿಸಿಕೊಳ್ಳಲು ನಮ್ಮ ಸರ್ಕಾರದ ಅವಧಿ ತೀರ್ಮಾನವನ್ನು ತಿರುಚಿ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆಗೆ ಒಪ್ಪಿಸುವ ವಿಚಾರದಲ್ಲಿ ಆಗಿನ ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆಯಲಾಗಿತ್ತು. ಜಾರಿ ನಿರ್ದೇಶನಾಲಯದ ಸೂಚನೆ ಪ್ರಕಾರ ಅಂದಿನ ಮುಖ್ಯ ಕಾರ್ಯದರ್ಶಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದಾರೆ. ಎಲ್ಲ ಕಾನೂನುರೀತ್ಯ ಕ್ರಮ ಅನುಸರಿಸಲಾಗಿದೆ ಎಂದು ಪುನರುಚ್ಚರಿಸಿದರು.
ಸಿಎಂ ಸಿದ್ದರಾಮಯ್ಯ ಮೊದಲ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಸಂಸ್ಥೆಗೆ ತಿಲಾಂಜಲಿಯಿಟ್ಟು ಭ್ರಷ್ಟರನ್ನು ರಕ್ಷಿಸಿದ್ದರು. ಇದೀಗ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಿಬಿಐ ತನಿಖೆಯಿಂದ ಪಾರು ಮಾಡುವ ಧಾವಂತದಲ್ಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ನಿಜವಾಗಿಯೂ ಸತ್ಯಹರಿಶ್ಚಂದ್ರರಾಗಿದ್ದರೆ ಸಿಬಿಐ ತನಿಖೆಗೆ ಭಯಪಡುವ ಅಗತ್ಯವೇಕೆ ? ಎಂದು ಪ್ರಶ್ನಿಸಿ ಕಾಲೆಳೆದಿದ್ದಾರೆ.
ವಿಧಾನಸಭೆ ಸ್ಪೀಕರ್ ಅವರ ಅನುಮತಿಯ ವ್ಯಾಪ್ತಿಯಲ್ಲೇ ಬರದೆ ಇರುವ ವಿಷಯಕ್ಕೆ ಸ್ಪೀಕರ್ ಅನುಮತಿಕೊಟ್ಟಿಲ್ಲವೆಂಬ ಕಾರಣವನ್ನು ಹೇಳಿ ಕ್ಯಾಬಿನೆಟ್ ನಿರ್ಣಯ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ಅಕ್ಷಮ್ಯ ಅಪರಾಧವೆಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಇಡೀ ದೇಶದ ಮುಂದೆ ಕರ್ನಾಟಕ ತಲೆತಗ್ಗಿಸುವಂತಹ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಸಂಸದೀಯ ವ್ಯವಸ್ಥೆಗೆ ಅಗೌರವ ತರುವ ನಿರ್ಧಾರವಿದು. ಇದಕ್ಕಾಗಿ ಸ್ಪೀಕರ್ ಸ್ಥಾನ ಬಳಕೆ ಮಾಡಿರುವುದು ದುರದೃಷ್ಟಕರ. ಹಿರಿಯರು, ಅನುಭವಿಗಳಾದ ಸಿಎಂ ಸಿದ್ದರಾಮಯ್ಯ ಅವರು ಒತ್ತಡದ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಛೇಡಿಸಿದರು.
ಒತ್ತಡಕ್ಕೆ ಮಣಿದು, ಅಸಹಾಯಕರಾಗಿ ಇಲ್ಲವೇ ಬಿಜೆಪಿ ಮೇಲೆ ಇನ್ನೇನೋ ಸಿಟ್ಟು, ದ್ವೇಷ ಸಾಧನೆಗೆ ಈ ರೀತಿ ರಾಜ್ಯದ ಜನರು, ನಮ್ಮ ವ್ಯವಸ್ಥೆಯೇ ತಲೆತಗ್ಗಿಸುವಂತಹ ನಿರ್ಣಯವನ್ನು ಮಾಡಬಾರದು ಎಂದು ಕಾಗೇರಿ ಆಗ್ರಹಿಸಿದರು.
ಡಿಕೆಶಿ ವಿರುದ್ಧ ಸಿಬಿಐ ತನಿಖೆ ಕೈಬಿಟ್ಟ ನಿರ್ಣಯವು ಆಡಳಿತ, ಪ್ರತಿಪಕ್ಷಗಳ ಅಂಗಳದಲ್ಲಿ ಪರ-ವಿರೋಧ ಚರ್ಚೆಯ ಬೆಂಕಿ ಹೊತ್ತಿಕೊಂಡಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ಪ್ರಶ್ನೆಗಳನ್ನಿಡುವ ಮೂಲಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರು ಚರ್ಚೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು, ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ವಾಪಸ್ ಪಡೆಯಲಾಗಿದ್ದು, ಸಚಿವ ಬಿ.ನಾಗೇಂದ್ರ ಅವರ ವಿಷಯದಲ್ಲೂ ಇದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿತ್ತು. ಡಿಕೆಶಿಗೊಂದು ನ್ಯಾಯ, ನಾಗೇಂದ್ರಗೊಂದು ನ್ಯಾಯವೆ ? ಎಂದು ಜನಾರ್ದನರೆಡ್ಡಿ ಕೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಈ ಹಿಂದೆ ತಮ್ಮ ವಿರುದ್ಧವೂ ಸಿಬಿಐ ತನಿಖೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಕಾನೂನುಬದ್ಧ ಕೈಗೊಂಡ ಕ್ರಮವೋ ಅಥವಾ ರಾಜಕೀಯ ದ್ವೇಷ ಸಾಧಿಸಲು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೋ ? ಎಂದು ಜನಾರ್ದನರೆಡ್ಡಿ ಪ್ರಶ್ನಿಸಿದ್ದಾರೆ.