ನವದೆಹಲಿ: ಕಾಳಧನ ವಹಿವಾಟು ತಡೆಗೆ ಕಠಿಣ ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, 2014-15ರಲ್ಲಿ 1,038 ಕೋಟಿ ರೂಪಾಯಿ ಕಾಳಧನವನ್ನು ಹಾಂಕಾಂಗ್ಗೆ ವರ್ಗಾಯಿಸಿದ 48 ಸಂಸ್ಥೆ ಮತ್ತು ಮೂವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಈ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದೆ. ಬಹುತೇಕ ವಹಿವಾಟುಗಳನ್ನು ಈ ಸಂಸ್ಥೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೂಲಕ ನಡೆಸಿದ್ದು, ಅಲ್ಲಿನ ಗುರುತು ಹೇಳಲಿಚ್ಛಿಸದ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಿಬಿಐ ತನಿಖೆ ವೇಳೆ ಬಹಿರಂಗಗೊಂಡ ಮಾಹಿತಿ ಪ್ರಕಾರ, 48 ಸಂಸ್ಥೆಗಳು 51 ಕರೆಂಟ್ ಅಕೌಂಟ್ಗಳನ್ನು ಮೇಲಿನ ಬ್ಯಾಂಕುಗಳ ಹಾಂಕಾಂಗ್ ಶಾಖೆಯಲ್ಲಿ ತೆರೆದಿದ್ದವು. ಇವುಗಳ ಮೂಲಕ ಹೊರದೇಶಕ್ಕೆ ರವಾನಿಸಿದ ಹಣದ ಮೊತ್ತ 1,038 ಕೋಟಿ ರೂಪಾಯಿ ಆಗಿತ್ತು. ಸಿಬಿಐ ಎಫ್ಐಆರ್ನಲ್ಲಿ 48 ಸಂಸ್ಥೆಗಳ ಹೊರತಾಗಿ ಮೊಹಮ್ಮದ್ ಇಬ್ರಾಹಂಸಾ ಜೋನಿ, ಝಿಂಟಾ ಮಿಧರ್, ನಿಜಾಮುದ್ದೀನ್ ಎಂಬುವವರ ಹೆಸರು ದಾಖಲಾಗಿವೆ. (ಏಜೆನ್ಸೀಸ್)