ನ್ಯೂಸ್

ತಮಿಳುನಾಡು ಹೊರಟಳು ಕಾವೇರಿ; ಸಿಡಿದೆದ್ದ ಮಾಜಿ ಸಿಎಂ

ಬೆಂಗಳೂರು: ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಅರ್ಜಿ ಹಾಕಿದ ತಕ್ಷಣ ಕಾವೇರಿ ನೀರು ಬಿಟ್ಟು, ರಾಜ್ಯದ ರೈತರ ಹಿತ ಕಡೆಗಣಿಸಿರುವುದು ಅಕ್ಷಮ್ಯ ಅಪರಾಧವೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಡಿದೆದ್ದು, ಛಲವಿಲ್ಲದ ಕಾಂಗ್ರೆಸ್ ಸರ್ಕಾರವೆಂದು ಗುಡುಗಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕುರುವೈ ಬೆಳೆಗೆ ತಮಿಳುನಾಡು ದುಪ್ಪಟ್ಟು ನೀರು ಬಳಕೆ ಮಾಡಿಕೊಟ್ಟಿರುವುದನ್ನು ಮನವರಿಕೆ ಮಾಡಿಕೊಡಲಿಲ್ಲ. ಕುರುವೈ ಬೆಳೆ ಬೆಳೆಯುವ ಕ್ಷೇತ್ರ ನಾಲ್ಕುಪಟ್ಟು ವಿಸ್ತರಿಸಿದ್ದನ್ನು ಅಧಿಕಾರಿಗಳು ಪ್ರಸ್ತಾಪಿಸಿ ಪ್ರತಿಭಟಿಸಲೂ ಇಲ್ಲ.

ರಾಜ್ಯದ ರೈತರಿಗೆ ಈ ಮೊದಲು ನೀರು ಬಿಡದೇ ಜಲಾಶಯಗಳಲ್ಲಿ ರಾಜ್ಯದ ಪಾಲು ಸಂಗ್ರಹ ಮಾಡಿಕೊಳ್ಳಲಾಯಿತು. ನೀರು ಪೂರೈಕೆ ತೀರ್ಮಾನ ವಿಳಂಬವಾಗಿದ್ದರಿಂದ ತಮಿಳುನಾಡಿಗೆ ನೀರು ಪೂರೈಸುವ ಪರಿಸ್ಥಿತಿ ತಂದುಕೊಂಡಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ತಕ್ಷಣ ನೀರು ಪೂರೈಕೆ ನಿಲ್ಲಿಸಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ಸುಪ್ರೀಂ ಕೋರ್ಟ್‌ಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕು. ರಾಜ್ಯದ ರೈತರ ಹಿತರಕ್ಷಿಸಬೇಕು. ಕಾವೇರಿ ನೀರು ಸಂಗ್ರಹ, ಬಳಕೆ ಮತ್ತು ಪೂರೈಕೆ ವಿಚಾರದಲ್ಲಿ ಪ್ರತಿಪಕ್ಷದಲ್ಲಿದ್ದಾಗ ದೊಡ್ಡ, ದೊಡ್ಡ ಮಾತು ಆಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದ ರೈತರ ಹಿತ ಬಲಿಗೊಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಾವೇರಿ ನೀರು ನಿರ್ವಹಣೆ ವಿಚಾರದಲ್ಲಿ ಒಮ್ಮತವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿಗೆ ಕಾವೇರಿ ಬಿಡುವುದು ಸಾಧ್ಯವೇ ಇಲ್ಲವೆಂದರು. ಆದರೆ ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡಿಗೆ ಕಾವೇರಿ ಬಿಡಲು ಒಪ್ಪಿಗೆ ನೀಡಿದ್ದಾರೆ.

ಸಚಿವ ಸಂಪುಟದಲ್ಲೇ ಹೊಂದಾಣಿಕೆಯಿಲ್ಲದಿದ್ದರೆ ರಾಜ್ಯದ ರೈತರನ್ನು ಕಾಪಾಡುವುದು ಹೇಗೆ ಸಾಧ್ಯ ? ಎಂದು ಬೊಮ್ಮಾಯಿ ಪ್ರಶ್ನಿಸಿದ್ದು, ರಾಜ್ಯದ ಪಾಲಿನ ನೀರು ರಾಜ್ಯಕ್ಕೆ ಉಳಿಸಿಕೊಳ್ಳುವ ಛಲವೂ ಸರ್ಕಾರಕ್ಕಿಲ್ಲವೆಂದು ತಿವಿದಿದ್ದಾರೆ.