ಬೆಂಗಳೂರು: ಕಾಂಗ್ರೆಸ್‌ಗೆ ತಮಿಳುನಾಡಿನ ಜತೆ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡಿರುವುದರಿಂದಲೇ ರಾಜ್ಯಕ್ಕೆ ಕಾವೇರಿ ವಿಷಯದಲ್ಲಿ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕಾವೇರಿ ನೀರು ಹರಿಸುವ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಡಿಎಂಕೆ ಅಂಗಪಕ್ಷವಾಗಿರುವ ಇಂಡಿಯಾ ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿತವನ್ನು ಬಲಿಗೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ. ಆದರೆ ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ. ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು ರಾಜ್ಯ ಸರ್ಕಾರ. ಈ ಮಾತನ್ನು ನಾನು ಸರ್ವಪಕ್ಷ ಸಭೆಯಲ್ಲೇ ಒತ್ತಿ ಹೇಳಿದ್ದೆ. ಕಾವೇರಿ ಜಲ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ನಿರ್ದೇಶನ ಬರುವುದಕ್ಕೂ ಮೊದಲೂ ಹೇಳಿದ್ದೆ. ಹೇಳಿದ ಮಾತನ್ನು ಕೇಳಿಸಿಕೊಳ್ಳುವ ಸೌಜನ್ಯ, ಜನಪರ ಕಾಳಜಿ ಸರ್ಕಾರಕ್ಕೆ ಇರಲೇ ಇಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರಕ್ಕೆ ಜನಹಿತಕ್ಕಿಂತ ರಾಜಕೀಯ ಹಿತವೇ ಮುಖ್ಯವಾಗಿದೆ. ತಮಿಳುನಾಡಿನ ಜತೆ ಆ ಪಕ್ಷದ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡ ಕಾರಣಕ್ಕೆ ಕಾವೇರಿ ಹಿತವನ್ನು ವ್ಯವಸ್ಥಿತವಾಗಿ ಬಲಿ ಕೊಡಲಾಗಿದೆ. ಆ.10ರಂದು ಕಾವೇರಿ ಜಲ ನಿಯಂತ್ರಣ ಸಮಿತಿ ಸಭೆ ನಡೆಯಿತು. ಮರುದಿನ ಕಾವೇರಿ ಜಲನಿರ್ವಹಣಾ ಪ್ರಾಧಿಕಾರ ಸಭೆ ಆಯಿತು. ಮುಂದಿನ 15 ದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಿ ಎಂದು ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿತು. ತಕ್ಷಣವೇ ಸುಪ್ರೀಂಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿ, ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು ಎಂದು ಹೇಳಿದ್ದಾರೆ.
ಕಾವೇರಿ ವಿಷಯ ಕೋರ್ಟಿನಲ್ಲಿ ಬಗೆಹರಿಯುವುದಿಲ್ಲ ಎಂದು ನಾನು ಹೇಳಿದ್ದೆ. ಈಗ ತಮಿಳುನಾಡಿಗೆ ಅನುಕೂಲವಾಗಿದೆ. ನಮಗೆ ಅನ್ಯಾಯವಾಗಿದೆ. ಈ ತಿಕ್ಕಾಟ ಸಾಗುತ್ತಿರುವ ದಿಕ್ಕು ನೋಡಿದರೆ ಒಕ್ಕೂಟ ವ್ಯವಸ್ಥೆಗೆ ಗೌರವ ಸಿಗುವಂತಿಲ್ಲ. ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲಿಯೂ ಕಾವೇರಿ ಬಗ್ಗೆ ದನಿ ಎತ್ತಿದರು. ಸಭಾಪತಿಗಳು ಕುಳಿತೇ ಮಾತನಾಡಿ ಎಂದರೂ ಅವರು ಎದ್ದುನಿಂತು ರಾಜ್ಯದ ಪರ ಹಕ್ಕು ಮಂಡಿಸಿದರು. ಆದರೆ ರಾಜ್ಯದ ಇತರೆ ಸದಸ್ಯರು, ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರು ಮೌನವಾಗಿದ್ದರು! ಅವರ ಮೌನ ನನಗೆ ಅಚ್ಚರಿ ಉಂಟು ಮಾಡಿದೆ. ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೌದು. ಆದರೆ ಕರ್ನಾಟಕದ ಹಿತದ ಬಗ್ಗೆ ಅವರ ನಿಲುವೇನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸೆ. 13ರಿಂದ ನಿತ್ಯವೂ 5,000 ಕ್ಯೂಸೆಕ್ ನೀರು ಬಿಡಬೇಕು ಎಂದು ಪ್ರಾಧಿಕಾರ ಆದೇಶ ನೀಡಿದೆ. ಅದನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಕೋರ್ಟ್ ಆದೇಶಕ್ಕೂ ಮೊದಲು ಪ್ರಾಧಿಕಾರ ಹೇಳಿತು ಎಂದು ವಿದ್ಯುತ್ ವೇಗದಲ್ಲಿ ನೀರು ಬಿಟ್ಟ ಸರ್ಕಾರವು ಈಗ ಸುಪ್ರೀಂಕೋರ್ಟ್ ಹೇಳಿದೆ, ಇನ್ನೇನು ಮಾಡುವುದು ಎಂದು ಕೈ ಚೆಲ್ಲಿದೆ. ಮರು ಪರಿಶೀಲನಾ ಅರ್ಜಿಯನ್ನು ಕೋರ್ಟಿಗೆ ತುರ್ತಾಗಿ ಸಲ್ಲಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.