ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಭಾರತವನ್ನು ಗುರಿಯಾಗಿಸಲು ನೇಪಾಳ ಮಾರ್ಗವನ್ನು ಬಳಸಬಹುದು ಎಂಬ ಗುಪ್ತಚರ ಮಾಹಿತಿ ಇದ್ದು, ಸೂಕ್ತ ಕಟ್ಟೆಚ್ಚರ ವಹಿಸಬೇಕಾಗಿದೆ. ಪಾಕಿಸ್ತಾನ ಮೂಲದ ಕುಖ್ಯಾತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಮತ್ತು ಜೈಷ್-ಎ-ಮೊಹಮದ್ (ಜೆಇಎಂ) ನೇಪಾಳ ಮಾರ್ಗವನ್ನು ಬಳಸಿ ಭಾರತಕ್ಕೆ ಭಾರಿ ಅಪಾಯ ಉಂಟಾಗಿಸುವ ಸಾಧ್ಯತೆಗಳಿವೆ ಎಂಬ ಎಚ್ಚರಿಕೆಯನ್ನು ನೇಪಾಳ ಪ್ರಧಾನಮಂತ್ರಿ ಅವರ ಸಲಹೆಗಾರ ಸುನೀಲ್ ಬಹದೂರ್ ಥಾಪಾ ಶುಕ್ರವಾರ ನೀಡಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರದಾಳಿಯ ನಂತರ ಭಾರತದಲ್ಲಿ ಭದ್ರತೆ ಮತ್ತಷ್ಟು ಬಿಗಿಯಾಗಿದ್ದು, ಈ ಹಿನ್ನೆಲೆಯಲ್ಲಿ ಭಯೋತ್ಪಾದಕ ಗುಂಪುಗಳು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿವೆ. ಭಾರತ ಮತ್ತು ನೇಪಾಳ 1,751 ಕಿ.ಮೀ. ಉದ್ದದ ಗಡಿಯನ್ನು ಹೊಂದಿವೆ. ಆದರೆ, ಅಲ್ಲಿ ಕನಿಷ್ಠ ಭದ್ರತಾ ತಪಾಸಣೆ ಇದೆ. ಇಂಥ ಪ್ರದೇಶದಲ್ಲಿ ಭಯೋತ್ಪಾದಕರು ಭಾರತಕ್ಕೆ ನುಸುಳುವುದು ಸುಲಭ. ಅಲ್ಲದೆ, ನೇಪಾಳಿಗಳ ದಾಖಲೆಗಳನ್ನು ಬಳಸಿ ಭಯೋತ್ಪಾದಕರು ತಮ್ಮ ಗುರುತು ಮರೆಮಾಚಿ ನುಸಳುವುದು ಕೂಡ ನಡೆಯುತ್ತಿದೆ. ಮಾತ್ರವಲ್ಲದೆ, ಕೆಲವು ವರ್ಷಗಳಿಂದ ಎಲ್ಇಟಿ ಮತ್ತು ಜೆಇಎಂನ ಹಲವರು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಹಿನ್ನೆಲೆಯಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ.
ಪಾಕಿಸ್ತಾನ ಭಯೋತ್ಪಾದನೆಯ ರಫ್ತು ನಿಲ್ಲಿಸುತ್ತಿಲ್ಲ ಎಂಬುದು ಈ ಪ್ರಯತ್ನಗಳಿಂದ ಸ್ಪಷ್ಟವಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ವಲಯದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟದ ಬಗ್ಗೆ ಮತ್ತು ಪಾಕಿಸ್ತಾನ ಉಗ್ರವಾದವನ್ನು ಪ್ರಾಯೋಜಿಸುತ್ತಿರುವ ಬಗ್ಗೆ ದ್ವಂದ್ವ ನಿಲುವುಗಳಿರುವುದು ಕಳವಳಕಾರಿ. ಚೀನಾ ತನ್ನ ಹಿತಾಸಕ್ತಿಗಾಗಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ. ಅಮೆರಿಕ ಭಾರತದ ಅತ್ಯಾಪ್ತ ರಾಷ್ಟ್ರ ಎಂದು ಕರೆಸಿಕೊಂಡರೂ ಪಾಕಿಸ್ತಾನದ ಬಗ್ಗೆ ಪ್ರೀತಿ ತೋರುತ್ತಿದೆ. ಹೀಗಿರುವಾಗ ಭಯೋತ್ಪಾದನೆಯ ವಿರುದ್ಧದ ಹೋರಾಟ ಸಂಘಟಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲು ಹೇಗೆ ಸಾಧ್ಯ? ಭಾರತದಲ್ಲಿ ಭಯೋತ್ಪಾದನೆಯ ಸಮಸ್ಯೆ ಹೆಚ್ಚಿದರೆ ಅದರಿಂದ ನೆರೆಯ ನೇಪಾಳ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್ ಸೇರಿದಂತೆ ಹಲವು ರಾಷ್ಟ್ರಗಳಿಗೂ ಸಮಸ್ಯೆಯೇ ಎಂಬುದನ್ನು ಮರೆಯುವಂತಿಲ್ಲ. ಸಾರ್ಕ್ ರಾಷ್ಟ್ರಗಳು ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡುವ ಜತೆಗೆ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೂ ಬದ್ಧತೆ ತೋರಬೇಕು.
ಉಗ್ರ ಸಂಘಟನೆಗಳಿಗೆ ದೊರೆಯುತ್ತಿರುವ ಹಣಕಾಸು ಮೂಲವನ್ನು ಕಿತ್ತೊಗೆಯಲು ಇನ್ನೂ ಸಾಧ್ಯವಾಗಿಲ್ಲ. ಭಾರತ ‘ಆಪರೇಷನ್ ಸಿಂಧೂರ’ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಶಿಬಿರಗಳನ್ನು ಹೊಡೆದುರಳಿಸಿದೆ. ಈ ಘಟನೆಯ ಬಳಿಕವಾದರೂ ಅಂತಾರಾಷ್ಟ್ರೀಯ ವಲಯ ಪಾಕ್ನ ನೀಚತನವನ್ನು ಅರಿತು, ಅದಕ್ಕೆ ಎಲ್ಲ ರೀತಿಯ ಸಹಕಾರವನ್ನು ನಿಲ್ಲಿಸಬೇಕಿತ್ತು. ಇಂಥ ದಿಟ್ಟ ಕ್ರಮಗಳು ಕೈಗೊಳ್ಳದ್ದರಿಂದಲೇ ಭಯೋತ್ಪಾದಕ ಸಂಘಟನೆಗಳು ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿವೆ. ಇದು ಅಪಾಯದ ಮುನ್ಸೂಚನೆಯಾಗಿದ್ದು, ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತ ಸರ್ಕಾರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉಗ್ರ ದಮನದ ಅವಶ್ಯಕತೆಯ ಬಗ್ಗೆ ಹಲವು ಬಾರಿ ಪ್ರತಿಪಾದಿಸಿದೆ. ಈ ಬಗ್ಗೆ ಇನ್ನಷ್ಟು ಗಟ್ಟಿಯಾಗಿ ದನಿ ಎತ್ತುವ ಮೂಲಕ ಉಗ್ರರ ಸಂಚುಗಳನ್ನು ವಿಫಲಗೊಳಿಸಬೇಕಿದೆ.