ಭೋಪಾಲ್(ಮಧ್ಯಪ್ರದೇಶ) : ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ನದಿಗೆ ಕೆಲವರು ಹಸುಗಳನ್ನು ತಳ್ಳಿದ್ದಾರೆ. ಈ ಅಮಾನವೀಯ ಘಟನೆಯಲ್ಲಿ ಸುಮಾರು 15-20 ಹಸುಗಳು ಮೃತಪಟ್ಟಿದ್ದು, ವೀಡಿಯೋ ವೈರಲ್ ಆದ ನಂತರ ಸತ್ನಾ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿದ್ದಾರೆ.
20ಕ್ಕೂ ಹೆಚ್ಚು ಹಸುಗಳನ್ನು ನೀರಿಗೆ ತಳ್ಳುವುದಕ್ಕೆ ನಿಖರ ಕಾರಣವೇನೆಂಬುದು ತಿಳಿದು ಬಂದಿಲ್ಲ. ಜನರ ಗುಂಪೊಂದು ಮಂಗಳವಾರ ನದಿ ದಂಡೆಗೆ 30-40 ಹಸುಗಳನ್ನು ಎಳೆದುತಂದು ಪ್ರವಾಹ ಏರ್ಪಟ್ಟಿದ್ದ ನದಿಗೆ ತಳ್ಳಿದ್ದಾರೆ. ಇದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಲ್ವರು ಆರೋಪಿಗಳಾದ ಬೇಟಾ ಬಗ್ರಿ, ರವಿ ಬಗ್ರಿ, ರಾಂಪಾಲ್ ಚೌಧರಿ ಮತ್ತು ರಾಜ್ಲು ಚೌಧರಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಹಸುಗಳನ್ನು ನದಿಗೆ ಏಕೆ ತಳ್ಳಲಾಯಿತು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ತನಿಖೆಯಿಂದಷ್ಟೇ ಕಾರಣ ತಿಳಿದುಬರಲಿದೆ. ಗೋಹತ್ಯೆ ನಿಷೇಧ ಕಾನೂನಿನ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ನ ಅಡಿಯಲ್ಲಿ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ನಾಗೋಡ ಪೊಲೀಸ್ ಠಾಣೆ ಪ್ರಭಾರಿ ಇನ್ಸ್ಪೆಕ್ಟರ್ ಅಶೋಕ್ ಪಾಂಡೆ ಹೇಳಿದರು.
ನದಿಗೆ ಎಸೆದ ಹಸುಗಳ ನಿಖರ ಸಂಖ್ಯೆ ಮತ್ತು ಅವುಗಳ ಸಾವಿನ ಸಂಖ್ಯೆ ತನಿಖೆಯ ನಂತರ ಖಚಿತವಾಗಲಿದೆ. ಸದ್ಯ ಇತರೆ ಹಸುಗಳನ್ನು ಪತ್ತೆ ಹಚ್ಚಿ ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನಾಲ್ವರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.