ಬೆಂಗಳೂರು: ಸಂವಿಧಾನಬದ್ಧ ಹಕ್ಕಿನಲ್ಲಿ ಜಾತಿ, ಧರ್ಮ ಬರಬಾರದು. ಈ ಹಕ್ಕಿನ ವಿಚಾರವಾಗಿ ಯಾರು ಮಾತು ಸರಿಯಲ್ಲ. ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿರುವುದು ತಪ್ಪು. ಅದನ್ನು ಶ್ರೀಗಳು ಅರಿತು ತಪ್ಪು ಒಪ್ಪಿರುವುದು ಸಂತೋಷ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನಾತ್ಮಕ ಹಕ್ಕು ವಿಚಾರವಾಗಿ ಜಾತಿ, ಧರ್ಮ ತರಬಾರದು. ಆದರೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಬೆಂಕಿ ಹಚ್ಚುವ ಕೆಲಸ ಮಾಡಿ ಬೀಡಿ ಸೇದಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಜನತಾದಳ ಸರ್ಕಾರ ಕೇಸ್ ದಾಖಲಿಸಿತ್ತು. ಆಗ ಅಶೋಕಣ್ಣ ಮತ್ತಿತರರು ಎಲ್ಲಿ ಹೋಗಿದ್ದರು. ಬಾಲಗಂಗಾಧರನಾಥ ಸ್ವಾಮೀಜಿ ತಪ್ಪು ಮಾಡದಿದ್ದರೂ ಹತ್ತಾರು ವರ್ಷ ಕೋರ್ಟ್‌ಗೆ ಅಲೆದಾಡಿದರು ಎಂದರು.
ಸಮುದಾಯವನ್ನು ಬಳಸಿ ಬಿಸಾಡುತ್ತೇನೆ ಎನ್ನುವುದು ಸರಿಯಲ್ಲ. ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದೇನೆ. ಆದರೆ ಎಲ್ಲ ಜಾತಿ, ವರ್ಗ ಸಮುದಾಯಗಳನ್ನು ಸರಿಸಮಾನವಾಗಿ ನೋಡಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು.
ಪಕ್ಷದ ಮುಂದಿನ ಕಾರ್ಯಕ್ರಮಗಳು, ಯಶಸ್ಸುಗಳನ್ನು ಜನರ ಮುಂದೆ ಕೊಂಡೊಯ್ಯಬೇಕು. ಈ ವಿಷಯ ಚರ್ಚಿಸಲೆಂದು ಕೆಪಿಸಿಸಿ ಕಚೇರಿಯಲ್ಲಿ ಸಚಿವರು, ಸಂಸದ-ಶಾಸಕರು, ಪದಾಧಿಕಾರಿಗಳು, ಜಿಲ್ಲಾ ಘಟಕದ ಅಧ್ಯಕ್ಷರು, ಪಕ್ಷದ ಮುಂಚೂಣಿ ಘಟಕಗಳು, ವಿಭಾಗ, ಸೆಲ್ ಗಳ ರಾಜ್ಯಾಧ್ಯಕ್ಷರು ಮತ್ತಿತರ ಮುಖಂಡರು ಸಭೆ ಭಾನುವಾರ ನಡೆಯಲಿದೆ.
ಪಕ್ಷ ಆಯೋಜಿಸಲು ಬಯಸಿರುವ ಕಾರ್ಯಕ್ರಮಕ್ಕೆ ಸಾಥ್ ನೀಡಲು ವಿವಿಧ ಸಂಘಟನೆಗಳು ಮುಂದೆ ಬಂದಿರುವುದನ್ನು ಸಂತೋಷದಿಂದ ಸ್ವಾಗತಿಸಿರುವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.