ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪದಲ್ಲಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿದರು. ಡಾ. ಹಾ.ಮ.ನಾಗಾರ್ಜುನ, ಡಾ. ಯುವರಾಜ್, ಎಲ್.ಆನಂದ್, ಪ್ರೊ. ಎನ್.ರಾಜೇಶ್ವರಿ, ಡಾ. ನಾಗರಾಜ್ ಇತರರಿದ್ದರು.  
ನ್ಯೂಸ್

ವಿವಿಗಳಲ್ಲಿ ಜಾತಿ ಭೇದ ಕಳವಳಕಾರಿ: ಕುಲಪತಿ ಆತಂಕ

ಶಿವಮೊಗ್ಗ: ವಿಶ್ವ ವಿದ್ಯಾಲಯಗಳು ಪಾಳೇಗಾರಿಕೆಯ ಕೇಂದ್ರಗಳಾಗಬಾರದು. ಜಾತಿಯ ಹೊಲಸು ವಿವಿಗಳ ನಡುಮನೆಗೆ ಬಂದಿರುವುದು ದುರಂತ. ಸಂಶೋಧನೆಗಳು ದಿಕ್ಕು ತಪ್ಪುತ್ತಿವೆ. ಇದರಿಂದ ವೈಚಾರಿಕ ಪ್ರಜ್ಞೆಗಳು ಇಲ್ಲವಾಗಿ ಆಡಳಿತ ಮತ್ತು ಶೈಕ್ಷಣಿಕ ವ್ಯವಸ್ಥೆ ಕುಸಿದು ಮಕ್ಕಳಿಗೆ ದ್ರೋಹ ಬಗೆಯುವಂತಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಎಚ್ಚರಿಸಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕುವೆಂಪು ವಿವಿಯ ಶೈಕ್ಷಣಿಕ ವ್ಯವಸ್ಥೆ ಕುಸಿಯುವ ಆತಂಕ ಎದುರಾಗಿದೆ. ಉಪನ್ಯಾಸಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಕೆಲವು ಕಾಯಂ ಉಪನ್ಯಾಸಕರು ಸರಿಯಾಗಿ ಪಾಠ ಮಾಡುತ್ತಿಲ್ಲ. ಅತಿಥಿ ಉಪನ್ಯಾಸಕರನ್ನೇ ನಂಬಿ ಸೋಮಾರಿಗಳಾಗುತ್ತಿದ್ದಾರೆ. ಅತಿಥಿ ಉಪನ್ಯಾಸಕರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಉಪನ್ಯಾಸಕರು ತಮ್ಮ ಕರ್ತವ್ಯಗಳನ್ನು ಮರೆಯಬಾರದು. ಸರ್ಕಾರಗಳು ಜವಾಬ್ದಾರಿಯನ್ನು ಕಳಚಿಕೊಳ್ಳುವ ಈ ಹೊತ್ತಿನಲ್ಲಿ ವಿವಿಗಳು ಮತ್ತು ಕಾಲೇಜುಗಳು ಶಿಕ್ಷಣ ಸುಧಾರಣೆಗೆ ಪ್ರಯತ್ನಿಸಬೇಕು ಎಂದರು.
ಸಹ್ಯಾದ್ರಿ ವಿಜ್ಞಾನ ಪರಿಷತ್‌ನ ಕಾರ್ಯದರ್ಶಿ ಡಾ. ಹಾ.ಮ.ನಾಗಾರ್ಜುನ, ಅಂತಾರಾಷ್ಟ್ರೀಯ ಕುಸ್ತಿಪಟು ಎಲ್.ಆನಂದ್, ಪ್ರಾಚಾರ್ಯೆ ಪ್ರೊ. ಎನ್.ರಾಜೇಶ್ವರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ನಾಗರಾಜ್, ಪ್ರಮುಖರಾದ ಡಾ. ಯುವರಾಜ್, ಐಶ್ವರ್ಯಾ ಚಂದನ್ ಇತರರಿದ್ದರು.