ನ್ಯೂಸ್

ಜಾತಿ ಗಣತಿ ವರದಿ: ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸಿದ್ದರಾಮಯ್ಯ ; ಆರ್​.ಅಶೋಕ ವ್ಯಂಗ್ಯ | Cast Census Report

Cast Census Report : ಸಿಎಂ ಸಿದ್ದರಾಮಯ್ಯ ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ವರದಿ ಎಂಬ ಮಂಕು ಬೂದಿ ಎರಚಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡೋ ಕುತಂತ್ರ ಈಗ ಗುಟ್ಟಾಗಿ ಏನು ಉಳಿದಿಲ್ಲ ಎಂದು ವಿರೋಧಪಕ್ಷ ನಾಯಕ ಆರ್​.ಅಶೋಕ ವ್ಯಂಗ್ಯವಾಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಆರ್.ಅಶೋಕ,''ಇತೀಚೆಗೆ ನಡೆದ ಎಐಸಿಸಿ ಅಧಿವೇಶನದ ಸಂದರ್ಭದಲ್ಲಿ, ದೆಹಲಿ ಪ್ರವಾಸದ ವೇಳೆ ಸಿಎಂ ಸಿದ್ದರಾಮಯ್ಯನವರಿಗೆ ಭಾರಿ ಹಿನ್ನೆಡೆ ಆಗಿದೆ. ಹನಿಟ್ರಾಪ್ ಸೇರಿದಂತೆ ಸರ್ಕಾರದ ಸಾಲು ಸಾಲು ವೈಫಲ್ಯಗಳ ಬಗ್ಗೆ, ಎಡವಟ್ಟುಗಳು ವಿಚಾರವಾಗಿ ಹೈಕಮಾಂಡ್ ಸಿದ್ದರಾಮಯ್ಯನವರ ಬಣದ ಕಿವಿ ಹಿಂಡಿದೆ. ಆದ್ದರಿಂದಲೇ ಈಗ ಸಿದ್ದರಾಮಯ್ಯನವರು ಧಿಡೀರನೆ ಜಾತಿ ಜನಗಣತಿ ಜಪ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದೆ ಎಂದಿದ್ದಾರೆ.

ತಳಸಮುದಾಯವನ್ನು ದಾಳವಾಗಿ ಬಳಸುವುದಕ್ಕೆ ವಿರೋಧ

ನಾನು ಈಗಾಗಲೇ ಹಲವಾರು ಬಾರಿ ಹೇಳಿರುವಂತೆ ನಮ್ಮ ಸಮಾಜದಲ್ಲಿರುವ ತಳಸಮುದಾಯಗಳ ಅಭ್ಯುದಯಕ್ಕೆ ಯಾವುದೇ ಸಕಾರಾತ್ಮಕ ಹೆಜ್ಜೆ ಇಟ್ಟರೂ ಅದಕ್ಕೆ ನಮ್ಮ ಪಕ್ಷದ ಬೆಂಬಲವಿದೆ. ಆದರೆ, ರಾಜಕೀಯ ಹಾವು ಏಣಿ ಆಟದಲ್ಲಿ ಕೆಳಗೆ ಬಿದ್ದಾಗಲೆಲ್ಲ, ಅಧಿಕಾರದ ಚದುರಂಗದಾಟದಲ್ಲಿ ಮುಗ್ಗರಿಸಿದಾಗಲೆಲ್ಲ ಮೇಲೇಳುವುದಕ್ಕೆ ತಳಸಮುದಾಯಗಳನ್ನ ದಾಳವಾಗಿ ಬಳಸುವುದಕ್ಕೆ ನಮ್ಮ ವಿರೋಧವಿದೆ.

ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ, ಅವಾಸ್ತವಿಕ ಹಾಗು ಅಪ್ರಸ್ತುತ ಎನ್ನುವುದು ಬಹುತೇಕರ ಅಭಿಪ್ರಾಯ. ಇದಕ್ಕೆ ಅನೇಕ ಕಾರಣಗಳೂ ಇವೆ. ಈ ಹಿನ್ನಲೆಯಲ್ಲಿ ರಾಜ್ಯದ ಜನತೆಯ ಪರವಾಗಿ ಸಿಎಂ ಸಿದ್ದರಾಮಯ್ಯನವರ ಮುಂದೆ ಕೆಲವು ಗಂಭೀರವಾದ ಪ್ರಶ್ನೆಗಳನ್ನು ಇಟ್ಟಿದ್ದಾರೆ.

1.ಜಾತಿ ಜನಗಣತಿ ವರದಿಗೆ ಆಯೋಗದ ಕಾರ್ಯದರ್ಶಿ ಸಹಿ ಮಾಡಿಲ್ಲ ಎನ್ನುವ ಅನುಮಾನವಿದೆ. ಇದು ನಿಜವೇ? ಒಂದು ವೇಳೆ ಸಹಿ ಮಾಡಿಲ್ಲವಾದರೆ ಯಾಕೆ ಮಾಡಿಲ್ಲ?

2. ಸೀಲ್ಡ್ ಬಾಕ್ಸ್ನಲ್ಲಿದ್ದ ಮೂಲ ಪ್ರತಿ ಅಥವಾ ಹಸ್ತಪ್ರತಿ ಲಭ್ಯವಿಲ್ಲವೆಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದ್ದರು. ಇದರ ಸತ್ಯಾಸತ್ಯತೆ ಏನು?

3. ತಮಗೆ ನಿಜವಾಗಿಯೂ ಜಾತಿಗಣತಿಯ ಬಗ್ಗೆ ಬದ್ಧತೆ ಇದ್ದಿದ್ದರೆ, 2018ರಲ್ಲೇ ಕಾಂತರಾಜು ವರದಿಯನ್ನ ಏಕೆ ಸ್ವೀಕರಿಸಿ ಜಾರಿ ಮಾಡಲಿಲ್ಲ?

4.ಹತ್ತು ವರ್ಷಗಳ ಹಿಂದೆ ಕೈಗೊಂಡ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ, ಅನೇಕ ಜನರ ಮನೆಗಳಿಗೆ ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ. ಹೀಗಿರುವಾಗ ಈ ವರದಿಯನ್ನ ಈಗ ಮುನ್ನೆಲೆಗೆ ತರುವ ತರಾತುರಿ ಏಕೆ?

5.ಹತ್ತು ವರ್ಷಗಳ ಹಿಂದೆ ನಡೆಸಿರುವ ಈ ಸಮೀಕ್ಷೆ ಈಗ ಪ್ರಸ್ತುತವೇ ಅಲ್ಲ ಎನ್ನುವುದಕ್ಕೆ ತಮ್ಮ ಉತ್ತರವೇನು?

6. ಈ ಅವೈಜ್ಞಾನಿಕ ಜಾತಿ ಜನಗಣತಿ ವರದಿ ಸ್ವೀಕರಿಸದಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ. ಇದನ್ನ ಬೆಂಬಲಿಸಿ ಸ್ವತಃ ಉಪಮುಖ್ಯಮಂತ್ರಿ ಹಾಗು ಕೆಪಿಸಿಸಿ ಅಧ್ಯಕ್ಷ DK ಶಿವಕುಮಾರ್​ ಸಹಿ ಮಾಡಿದ್ದಾರೆ. ತಮ್ಮದೇ ಪಕ್ಷದ ಹಿರಿಯ ನಾಯಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕಳೆದ 22 ತಿಂಗಳಿನಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸರ್ವಸಮ್ಮತವಾದ ನಿಲುವಿಗೆ ಬರುವ ಬದಲು ಈಗ ದಿಢೀರನೆ ಏಕಾಏಕಿ ವರದಿಯನ್ನ ಸಂಪುಟ ಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿರುವುದು ಯಾವ ಕಾರಣಕ್ಕೆ ಎಂದು ಆರ್​.ಅಶೋಕ ಪ್ರಶ್ನಿಸಿದ್ದಾರೆ.