ಬೆಂಗಳೂರು: ಮೀಸಲಾತಿ ಹಾಗೂ ಎಲ್ಲಾ ಸೌಲಭ್ಯಗಳು ಕೇವಲ ಸಿಕ್ಕವರಿಗೇ ಸಿಗಬಾರದು. ಇದನ್ನು ಎಲ್ಲರಿಗೂ ದೊರೆಯುವಂತೆ ಮಾಡಲು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂದು ಮಾಜಿ ಸಂಸದ ಹಾಗೂ ಬಮುಲ್ ಅಧ್ಯಕ್ಷ DK ಸುರೇಶ್ ಹೇಳಿದರು.
ಇದನ್ನೂ ಓದಿ:ವಾಲ್ಮೀಕಿ ಭವನದಲ್ಲಿಯೇ ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿಯ ಆಚರಣೆಗೆ ತೀರ್ಮಾನ / ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
ನಗರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜಾತಿ ಸಮೀಕ್ಷೆ ಗೊಂದಲದಿಂದ ಕೂಡಿದೆ ಎನ್ನುವ ಆರೋಪಗಳ ಬಗ್ಗೆ ಕೇಳಿದಾಗ, “ನಾವು ಗಮನಿಸುತ್ತಿರುವುದು ಸೌಲಭ್ಯ ಇಲ್ಲದವರ ಸ್ಥಿತಿಗತಿಯನ್ನು ಮಾತ್ರ. ಇವುಗಳನ್ನು ಸಂಗ್ರಹಿಸಿ ಅವರನ್ನು ಮೇಲಕ್ಕೆತ್ತಲು ಯಾವ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕು ಎಂಬುದಾಗಿ ಆಲೋಚನೆ ಮಾಡಲಾಗುತ್ತದೆ. ಸಮೀಕ್ಷೆಯಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಗ್ರಾಮೀಣ ಹಾಗೂ ನಗರ ಭಾಗದ ಜನರು ಇದರಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಸಮೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಗೊಂದಲ ಮಾಡುತ್ತಿದ್ದಾರೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ” ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳನ್ನು ತೆಗೆದುಹಾಕಲು ಸಮೀಕ್ಷೆ ಮಾಡಲಾಗುತ್ತಿದೆ ಎನ್ನುವ ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ಕೇಂದ್ರ ಸರ್ಕಾರವೂ ಜಾತಿಗಣತಿ ನಡೆಸುತ್ತೇವೆ ಎಂದು ಕರೆ ನೀಡಿದೆ. ಸಿ.ಟಿ.ರವಿ, ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ನಾವು ಹಿಂದೂ ಜಾತಿಗೆ ಸೇರಿದವರು ಎಂದು ಅವರ ಕಾರ್ಯಕರ್ತರಿಗೆ ಕರೆ ನೀಡಲಿ. ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದಾದರೆ ʼಹಿಂದುʼ ಎಂದೇ ಬರೆಸಲು ಅಭಿಯಾನ ನಡೆಸಲಿ, ಒತ್ತಾಯ ಮಾಡಲಿ” ಎಂದರು.
“ಜಾತಿ,ಧರ್ಮ ಒಡೆಯಲಾಗುತ್ತಿದೆ ಎಂದು ಪದೇ, ಪದೇ ಆರೋಪ ಮಾಡುತ್ತಿದ್ದಾರಲ್ಲವೇ? ಹಾಗಾದರೆ ನಾವು ಭಾರತೀಯರು, ಹಿಂದುಗಳು ಮಾತ್ರ ಎಂದು ಹೇಳಲಿ. ಸಮೀಕ್ಷೆಯನ್ನು ವಿರೋಧ ಮಾಡುತ್ತಿರುವವರು ಹಳ್ಳಿ, ಹಳ್ಳಿಗೆ ಹೋಗಿ ಈ ಅಭಿಯಾನ ನಡೆಸಲಿ” ಎಂದರು.