ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಆರಂಭದಲ್ಲಿ ಗಣ್ಯರು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ವಾದಿರಾಜ್, ಬಿ.ವೈ.ರಾಘವೇಂದ್ರ, ಆರ್.ಕೆ.ಸಿದ್ದರಾಮಣ್ಣ, ಹರತಾಳು ಹಾಲಪ್ಪ, ಡಾ.ಧನಂಜಯ ಸರ್ಜಿ, ಎಸ್.ಎನ್.ಚನ್ನಬಸಪ್ಪ ಮುಂತಾದವರಿದ್ದರು.  
ನ್ಯೂಸ್

ಜಾತಿಗಣತಿ ಅಧಿಕಾರ ರಾಜ್ಯದಲ್ಲ, ಕೇಂದ್ರದ್ದು: ವಾದಿರಾಜ್

ಅರವಿಂದ ಅಕ್ಲಾಪುರ

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರದ್ದೇ ಹೊರತು ರಾಜ್ಯ ಸರ್ಕಾರದ್ದಲ್ಲ ಎಂದು ಸಾಮಾಜಿಕ ಚಿಂತಕ ವಾದಿರಾಜ್ ಹೇಳಿದರು.

ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಶಿವಮೊಗ್ಗ ವಿಭಾಗದಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗ ಜನಗಣತಿ ಜತೆಗೆ ಜಾತಿಗಣತಿಗೂ ಮುಂದಾಗಿದ್ದು, ಕರ್ನಾಟಕದವರು ಅದಕ್ಕೆ ಧ್ವನಿಗೂಡಿಸಬೇಕು ಎಂದರು.

ಕೇಂದ್ರ ಸರ್ಕಾರವು 32 ರೀತಿಯ ಮಾನದಂಡಗಳನ್ನು ಇರಿಸಿಕೊಂಡು ಜಾತಿಗಣತಿಗೆ ಮಾಡಲು ನಿರ್ಧರಿಸಿದೆ. ಇದರಲ್ಲಿ ಪ್ರತಿಯೊಬ್ಬರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರಗಳು ಒಳಗೊಂಡಿರುತ್ತವೆ. ಕಳೆದ 25 ವರ್ಷಗಳಿಂದೀಚೆಗೆ ಸಮಾಜದಲ್ಲಿ ಬೇರೆ ಬೇರೆ ಕಾರಣಗಳಿಗೆ ಜನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತಿದ್ದು, ಸಮಾಜದಲ್ಲಿ ಸ್ಥಿತ್ಯಂತರ ಉಂಟಾಗಿದೆ. ಕೇಂದ್ರ ಸರ್ಕಾರ ಇದನ್ನು ಸೂಕ್ಷ್ಮವಾಗಿ ಗಮನಿಸಿ ಗಣತಿಗೆ ಮುಂದಾಗಿದೆ ಎಂದು ಹೇಳಿದರು.

ಬ್ರಿಟಿಷರು 1871ರಲ್ಲಿ ಗಣತಿ ಆರಂಭಿಸಿ, ಅದನ್ನು 10 ವರ್ಷಕ್ಕೊಮ್ಮೆ ಕೈಗೊಳ್ಳುವ ಸಂಪ್ರದಾಯ ಹುಟ್ಟು ಹಾಕಿದರು. 1931ರಲ್ಲಿ ಬ್ರಿಟಿಷರು ಪ್ರಥಮ ಬಾರಿಗೆ ಜಾತಿಗಣತಿ ಆರಂಭಿಸಿದರು. ನಂತರ 2011ರವರೆಗೂ ಜನಗಣತಿ ನಡೆದಿದೆಯೇ ಹೊರತೂ ಜಾತಿಗಣತಿ ನಡೆದಿರಲಿಲ್ಲ ಎಂದು ತಿಳಿಸಿದರು.

2013ರಲ್ಲಿ ಸಿದ್ಧರಾಮಯ್ಯ ರಾಜ್ಯಮಟ್ಟದಲ್ಲಿ ಪ್ರಥಮವಾಗಿ ಜಾತಿಗಣತಿ ಆರಂಭಿಸುವ ಘೋಷಣೆ ಮಾಡಿದರು. ಜಾತಿಗಣತಿ ಕುರಿತಂತೆ ಕಾಂತರಾಜ ಆಯೋಗ, ಜಯಪ್ರಕಾಶ್ ಹೆಗ್ಡೆ ಆಯೋಗಗಳು ವರದಿ ಸಲ್ಲಿಸಿದರೂ ಅದನ್ನು ಅನುಷ್ಠಾನ ಮಾಡುವ ಚಿಂತನೆಯನ್ನು ಸಿದ್ಧರಾಮಯ್ಯ ಮಾಡಲಿಲ್ಲ ಎಂದು ದೂರಿದರು.

ಸಿದ್ಧರಾಮಯ್ಯ ಅವರು ಜಾತಿಗಣತಿಗಾಗಿ ಜನರ ತೆರಿಗೆಯ 165 ಕೋಟಿ ರೂ. ವೆಚ್ಚ ಮಾಡಿದರೂ ಪ್ರಯೋಜನವಾಗಲಿಲ್ಲ. ಕೇಂದ್ರ ಸರ್ಕಾರ ಜಾತಿಗಣತಿ ಘೋಷಣೆ ಮಾಡಿದ ನಂತರ ರಾಜ್ಯ ಸರ್ಕಾರ ಪುನಃ ಜಾತಿ ಗಣತಿಗೆ ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಜಾತಿಗಣತಿಗೆ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಶಿಕ್ಷಕರ ಮೇಲೆ ಇನ್ನಿಲ್ಲದ ಹೊರೆ ಹೇರುತ್ತಿದೆ. ಕೇಂದ್ರ ಸರ್ಕಾರ ಜಾತಿಗಣತಿಗೆ 13 ಸಾವಿರ ಕೋಟಿ ರೂ. ತೆಗೆದಿರಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇನ್ನಾದರೂ ರಾಜ್ಯ ಸರ್ಕಾರ ಈ ವಿಷಯದಲ್ಲಿ ಕೇಂದ್ರದ ಜತೆ ಕೈಜೋಡಿಸಿ ಗೊಂದಲಗಳಿಗೆ ಪೂರ್ಣವಿರಾಮ ಹಾಕಬೇಕು ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ, ಪ್ರಮುಖರಾದ ಶಿವಾನಂದ ನಾಯ್ಕ, ವಿ.ರಾಜು, ಸಿ.ಎಚ್. ಮಾಲತೇಶ್ ಮುಂತಾದವರಿದ್ದರು.