ಭದ್ರಾವತಿಯಲ್ಲಿ ತಾಲೂಕು ಕುರುಬರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಕನಕ ಗುರುಪೀಠ ಹೊಸದುರ್ಗ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಬಿ.ಎಂ.ಸಂತೋಷ್, ಬಿ.ಜಿ.ವಿನಯ್‌ಕುಮಾರ್, ಸಿ.ಮಹೇಶ್‌ಕುಮಾರ್ ಇತರರಿದ್ದರು.  
ನ್ಯೂಸ್

ಜಾತಿ ಆಧಾರಿತ ಗೌರವ ಸರಿಯಲ್ಲ

ಶಿವಕುಮಾರ ಎಸ್.ಪಿ.

ಭದ್ರಾವತಿ: ಪಾಲಕರು ಇಂದು ಮಕ್ಕಳಿಗೆ ಎಲ್ಲರನ್ನೂ ಗೌರವಿಸುವ, ಅತಿಥಿಗಳನ್ನು ಸತ್ಕರಿಸುವ ಹಾಗೂ ಸತ್ಯವನ್ನೇ ನುಡಿಯುವ ಮೌಲ್ಯಯುತ ಶಿಕ್ಷಣ ನೀಡಬೇಕು. ಆಗ ಮಾತ್ರ ಅವರು ದೊಡ್ಡವರಾದ ನಂತರ ಕುಟುಂಬ ಮತ್ತು ದೇಶ ರಕ್ಷಣೆಗೆ ಮುಂದಾಗುತ್ತಾರೆ ಎಂದು ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಳೇನಗರದ ತಾಲೂಕು ಕುರುಬರ ಸಂಘದಿಂದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಜೀವನದ ಕೊನೆಯವರೆಗೂ ನಮ್ಮ ಜತೆ ಇರುವುದು ಜ್ಞಾನ. ಅಂತಹ ಜ್ಞಾನಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಮೌಢ್ಯಗಳನ್ನು ಬದಿಗೊತ್ತಿ ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸಿದರೆ ಅವರು ಸಮಾಜದಲ್ಲಿ ಪ್ರತಿಭಾವಂತರಾಗಿ ಬೆಳೆಯುತ್ತಾರೆ. ನಮ್ಮ ಸಮಾಜ ನಮ್ಮತನವನ್ನು ಕಟ್ಟಿಕೊಳ್ಳಬೇಕು ಎಂದರು.

ಸಮಾಜದಲ್ಲಿ ಪ್ರತಿಭೆಗಳನ್ನು ಜಾತಿ ಆಧಾರದ ಮೇಲೆ ಗೌರವಿಸುತ್ತಿದ್ದಾರೆ. ಜಗತ್ತಿನಲ್ಲಿ ಹೆಚ್ಚು ವಿದ್ಯೆ ಪಡೆದಿರುವ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜಾತಿಯ ಕಾರಣಕ್ಕಾಗಿಯೇ ಗೌರವ ಸಿಗಲಿಲ್ಲ. ಅವರು ಉನ್ನತ ಕುಲದಲ್ಲಿ ಹುಟ್ಟಿದ್ದರೆ ಅವರ ಹೆಸರಿನಲ್ಲಿ ದೇವಸ್ಥಾನವನ್ನೇ ಕಟ್ಟುತ್ತಿದ್ದರು. ಆದರೆ ಸಂವಿಧಾನ ರಚನೆ ಮಾಡಿರುವ ಕಾರಣ ಇಂದು ಇಡೀ ಜಗತ್ತು ಅವರನ್ನು ಗೌರವಿಸುತ್ತಿದೆ. ಸಮಾಜದಲ್ಲಿ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ಆಗಬೇಕಿದೆ ಎಂದು ಹೇಳಿದರು.

ಕುರುಬರು ಅನಾಥರೇನಲ್ಲ. ದೊಡ್ಡ ಸಂಸ್ಕೃತಿ ಹೊಂದಿರುವ ವಿಜಯನಗರ ಸಾಮ್ರಾಜ್ಯವನ್ನೇ ಕಟ್ಟಿದವರು. ಆದರೆ ನಮ್ಮನ್ನು ಬಳಸಿಕೊಂಡು ಬೇರೆಯವರು ಬೆಳೆಯುತ್ತಿದ್ದಾರೆ. ನಾವೆಲ್ಲರೂ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು. ಜನರ ನಡುವೆ ನಿಂತು ಬೆಳೆಯಬೇಕು ಎಂದು ಸಲಹೆ ನೀಡಿದರು.

ಉದ್ಯಮಿ ಸಿ.ಮಹೇಶ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಧೈರ್ಯ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣ ನೀಡುವ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಾಠ ಮಾಡಿದ ಗುರುಗಳು ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಶಿಕ್ಷಣ ನೀಡಿದ ಗುರುಗಳನ್ನು ಮರೆಯಬೇಡಿ. ಅಹಂ ತ್ಯಜಿಸಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸ್ವಾಭಿಮಾನ ಬೆಳಸಿಕೊಳ್ಳಿ ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬಿ.ಎಂ.ಸಂತೋಷ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸಮಾಜದ ಮುಖಂಡರಾದ ಕರಿಯಪ್ಪ, ಡಿ.ಪ್ರಭಾಕರ ಬೀರಯ್ಯ, ಡಾ. ಎಚ್.ಆರ್.ನರೇಂದ್ರ, ರಾಕೇಶ್, ಹೇಮಾವತಿ, ವೈ.ರೇಣುಕಮ್ಮ, ಬಿ.ಎಚ್.ವಸಂತ, ಬಿ.ಎಸ್.ನಾಗರಾಜ್, ಬಿ.ಎಸ್.ಗೋಪಾಲ್, ರವಿಕುಮಾರ್, ಎನ್.ಸತೀಶ್, ವಿನೋದ್‌ಕುಮಾರ್, ಸಣ್ಣಯ್ಯ, ಕೇಶವ ಸೇರಿದಂತೆ ಹಲವರಿದ್ದರು.