ನ್ಯೂಸ್

ಜಾತಿ ನಿಂದನೆ ಆರೋಪ: ರಮೇಶ್ ಕತ್ತಿ ಬಂಧನಕ್ಕೆ ಶಾಸಕ ಬಿ. ದೇವೇಂದ್ರಪ್ಪ ಸಮ್ಮುಖದಲ್ಲಿ ಪ್ರತಿಭಟನೆ

ಜಗಳೂರು: ವಾಲ್ಮೀಕಿ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮಾಜಿ ಸಂಸದ ರಮೇಶ್ ಕತ್ತಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಪಟ್ಟಣದಲ್ಲಿ ತಾಲೂಕು ನಾಯಕ ಸಮುದಾಯದವರು ಪ್ರತಿಭಟನೆ ನಡೆಸಿದರು. ಶಾಸಕ ಬಿ. ದೇವೇಂದ್ರಪ್ಪ ಅವರ ಸಮ್ಮುಖದಲ್ಲಿ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಬಿ. ದೇವೇಂದ್ರಪ್ಪ, "ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳುವ ರಮೇಶ್ ಕತ್ತಿ ಅವರು ನಾಯಕ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇನೆ. ಕೂಡಲೇ ಅವರು ಸಮುದಾಯದ ಕ್ಷಮೆ ಕೇಳಬೇಕು ಮತ್ತು ಕಾನೂನಿನಡಿ ಶಿಕ್ಷೆಗೆ ಒಳಗಾಗಬೇಕು" ಎಂದು ಆಗ್ರಹಿಸಿದರು.

"ಹಣ ಮತ್ತು ಅಧಿಕಾರದ ಮದದಿಂದ ವಾಲ್ಮೀಕಿ ಸಮಾಜವನ್ನು ನಿಂದಿಸಿದ್ದಾರೆ. ಇದು ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಆದ್ದರಿಂದ ಕತ್ತಿಯನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಬೇಕು" ಎಂದು ಒತ್ತಾಯಿಸಿದರು.

ರಾಜ್ಯದಾದ್ಯಂತ ಎಫ್‌ಐಆರ್ ದಾಖಲು

ರಾಜ್ಯದ 70 ಪೊಲೀಸ್ ಠಾಣೆಗಳಲ್ಲಿ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿಯೂ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಕೂಡಲೇ ಅವರನ್ನು ಬಂಧಿಸಬೇಕು ಎಂದು ಶಾಸಕರು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಕೆ.ಪಿ. ಪಾಲಯ್ಯ ಮಾತನಾಡಿ, "ಮಾಜಿ ಸಂಸದರಾದವರು ಎಲ್ಲರಲ್ಲೂ ಸಮಾನತೆ ಕಾಣುವ ಬದಲು ಜಾತಿ ತಾರತಮ್ಯ ಮಾಡಿದರೆ ಸಮಾಜಕ್ಕೆ ಅವರ ಕೊಡುಗೆ ಏನು? ಮೊದಲು ಇಂತಹ ಕೊಳಕು ಮನಸ್ಥಿತಿ ಬಿಟ್ಟು ಹೊರಗೆ ಬರಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು" ಎಂದರು.

ಪ್ರತಿಭಟನೆಯಲ್ಲಿ ನಾಯಕ ಸಮಾಜದ ತಾಲೂಕಾಧ್ಯಕ್ಷ ಬುಳ್ಳೇನಹಳ್ಳಿ ನಾಗರಾಜ್, ಕಾರ್ಯದರ್ಶಿ ನಾಗರಾಜ್, ಮುಖಂಡರಾದ ಟಿ. ಬಸವರಾಜ್, ಆರ್. ಓಬಳೇಶ್, ಲಿಂಗಣ್ಣನಹಳ್ಳಿ ಅಜ್ಜಪ್ಪ, ಕೃಷ್ಣಮೂರ್ತಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪಾಲಯ್ಯ, ಹನುಮಂತಪ್ಪ, ಹನುಂತಾಪುರ ರಾಜಪ್ಪ, ಕ್ಯಾಂಪ್ ರೇವಣ್ಣ, ಬಿ. ಲೋಕೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.