ನ್ಯೂಸ್

ತಾಲೂಕಿಗೆ ಟಾಪರ್‌ಗಳಿಗೆ ನಗದು ಬಹುಮಾನ

ಹುಣಸೂರು: ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ತಾಲೂಕಿಗೆ ಟಾಪರ್ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಒಟ್ಟು 8.40 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಶಾಸಕ ಜಿ.ಡಿ.ಹರೀಶ್‌ಗೌಡ ಘೋಷಿಸಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಈ ಹಿಂದೆ ತಿಳಿಸಿದ್ದೆ. ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದೊಂದಿಗೆ ಪ್ರಯತ್ನ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ನೆರವು ಪಡೆಯಲು ಕ್ರಮವಹಿಸಿದ್ದೇನೆ. ಇದೀಗ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಟಾಪರ್‌ಗಳಿಗೆ ವೈಯಕ್ತಿಕವಾಗಿ ಒಟ್ಟು 8.40 ಲಕ್ಷ ರೂ.ಗಳ ನಗದು ಬಹುಮಾನವನ್ನು 2024-25ನೇ ಸಾಲಿನಿಂದ ನೀಡಲಿದ್ದೇನೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ವ್ಯಾಸಂಗಕ್ಕೆ ಪೂರಕವಾದ ವಿಚಾರಗಳನ್ನು ಮಾತ್ರ ಪಡೆದುಕೊಳ್ಳಬೇಕು. ಪಾಲಕರಿಗೆ ಗೌರವ ತರುವ ಕೆಲಸಮಾಡಬೇಕು. ಸ್ವಾವಲಂಬಿಯಾಗಲು ಪಣ ತೊಡಬೇಕು ಎಂದರು.
ಕಳೆದ ಸಾಲಿನಲ್ಲಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಪಡೆದ 63 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಎ.ರಾಮೇಗೌಡ ಮಾತನಾಡಿದರು.

ಬೀಜಗನಹಳ್ಳಿ ನಾಗರಾಜ್ ವ್ಯಕ್ತಿತ್ವ ವಿಕಸನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಿಡಿಸಿ ಉಪಾಧ್ಯಕ್ಷ ಶ್ರೀನಿವಾಸ್ ತಟ್ಟೆಕೆರೆ, ಉಪನ್ಯಾಸಕರು, ವಿದ್ಯಾರ್ಥಿನಿಯರು ಇದ್ದರು.

ನಗದು ಬಹುಮಾನದ ವಿವರ: ಎಸ್‌ಎಸ್‌ಎಲ್‌ಸಿ ವಿಭಾಗದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಪ್ರಥಮ ಮೂರುಸ್ಥಾನಗಳಿಗೆ ನಗದು ನೀಡಲಿದ್ದು, ಪ್ರಥಮಸ್ಥಾನಕ್ಕೆ ರೂ.20 ಸಾವಿರ, ದ್ವಿತೀಯಸ್ಥಾನಕ್ಕೆ ರೂ.15 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ ರೂ.10 ಸಾವಿರ ರೂ.ಗಳ ನಗದು ನೀಡಲಾಗುವುದು. ಪಿಯುಸಿಯ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಪ್ರಥಮ ಮೂರುಸ್ಥಾನಗಳಿಗೆ ಬಹುಮಾನ ನೀಡಲಿದ್ದು, ಪ್ರಥಮಸ್ಥಾನಕ್ಕೆ ರೂ.25 ಸಾವಿರ, ದ್ವಿತೀಯಸ್ಥಾನಕ್ಕೆ ರೂ.20 ಸಾವಿರ ಮತ್ತು ತೃತೀಯ ಸ್ಥಾನಕ್ಕೆ ರೂ.15 ಸಾವಿರ ರೂ.ಗಳ ನಗದುಬಹುಮಾನ ನೀಡಲಾಗುವುದು. ಪದವಿ ವಿಭಾಗದಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಕ್ಕೆ ಪ್ರಥಮಸ್ಥಾನಕ್ಕೆ ರೂ.30 ಸಾವಿರ, ದ್ವಿತೀಯಸ್ಥಾನಕ್ಕೆ ರೂ.25 ಸಾವಿರ ಮತ್ತು ತೃತೀಯಸ್ಥಾನಕ್ಕೆ 20 ಸಾವಿರ ರೂ.ಗಳನ್ನು ನಗದುಬಹುಮಾನವಾಗಿ ನೀಡಲಾಗುತ್ತದೆ.