ನ್ಯೂಸ್

ಲಾಕ್​ಡೌನ್​ ನಿಯಮ ಉಲ್ಲಂಘಿಸಿದವರಿಗೆ ಗುಡ್​ ನ್ಯೂಸ್​! ಎಲ್ಲ ಪ್ರಕರಣಗಳು ವಾಪಾಸ್​!

ಲಖನೌ: ಕರೊನಾ ತಡೆಗಟ್ಟುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದವು. ಲಾಕ್​ಡೌನ್​ ವೇಳೆ ಹೊರಗಡೆ ಸುತ್ತಾಡಿ, ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣಗಳನ್ನೂ ದಾಖಲಿಸಿಕೊಳ್ಳಲಾಗಿತ್ತು. ರಾಜ್ಯದ ಸಾಮಾನ್ಯ ವರ್ಗದ ಜನರ ಹಿತದೃಷ್ಟಿಯಿಂದಾಗಿ ಇದೀಗ ಯೋಗಿ ಆದಿತ್ಯಾನಾಥ ಸರ್ಕಾರವು ಲಾಕ್​ಡೌನ್​ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ.

ಲಾಕ್​ಡೌನ್​ ಸಮಯದಲ್ಲಿ ಪೆಂಡಮಿಕ್​ ಕಾಯ್ದೆ ಜಾರಿಯಲ್ಲಿತ್ತು. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಸೆಕ್ಷನ್​ 188 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಸುಮಾರು 2.5 ಲಕ್ಷ ಜನರ ವಿರುದ್ಧ ಲಾಕ್​ಡೌನ್​ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಅವರೆಲ್ಲರೂ ಕೋರ್ಟ್​, ಪೊಲೀಸ್​ ಠಾಣೆಗೆ ಓಡಾಡುವ ಸ್ಥಿತಿ ಬಂದೊದಗಿತ್ತು. ಅವರಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಿದ್ದಾರೆ.

ಮೊದಲೇ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಕುಟುಂಬಗಳಿಗೆ ಇದೀಗ ಈ ಪ್ರಕರಣದಿಂದಾಗಿ ಇನ್ನಷ್ಟು ಹೊರೆ ಮಾಡುವುದು ಬೇಡವೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದೇ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.

ಲಾಕ್​ಡೌನ್​ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಹಿಂಪಡೆದಿರುವ ಮೊದಲ ರಾಜ್ಯವಾಗಿ ಉತ್ತರ ಪ್ರದೇಶ ಹೊರಹೊಮ್ಮಿದೆ. ಉತ್ತರ ಪ್ರದೇಶದಂತೆಯೇ ಬೇರೆ ರಾಜ್ಯಗಳೂ ಮಹತ್ತರ ನಿರ್ಧಾರ ತೆಗೆದುಕೊಳ್ಳಲಿವೆಯೇ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)