ನ್ಯೂಸ್

ನಟಿ ರಮ್ಯಾ ನೀಡಿದ ಪ್ರಕರಣ: ಡಿಸಿಪಿ ನೇತೃತ್ವದಲ್ಲಿ ತನಿಖೆ

ಬೆಂಗಳೂರು: ನಟಿ ರಮ್ಯಾ ಅವರು ನಟ ದರ್ಶನ್ ಅಭಿಮಾನಿಗಳ ವಿರುದ್ಧ ನೀಡಿರುವ ದೂರಿನ ಬಗ್ಗೆ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದರು.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಸೈಬರ್ ಠಾಣೆಗೆ ಪ್ರಕರಣ ನೀಡಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ ಡಿಸಿಪಿ ಮಟ್ಟದ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ ಎಂದರು.

ನಟಿ ರಮ್ಯಾ ಅವರು ಸೋಮವಾರ ಸಂಜೆ ತಮ್ಮ ಕಚೇರಿಗೆ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರಮ್ಯಾ ನಿವಾಸಕ್ಕೆ ಪೊಲೀಸರ ಭೇಟಿ:

ರಿಚ್ಮಂಡ್‌ಟೌನ್‌ಲ್ಲಿರುವ ನಟಿ ರಮ್ಯಾ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ಸೈಬರ್ ಕ್ರೈಂ ಠಾಣೆಯ ಪೊಲೀಸರು ಯಾವ ಪೇಜ್‌ಗಳಿಂದ ಅಶ್ಲೀಲ ಕಮೆಂಟ್‌ಗಳು ಬಂದಿತ್ತು. ಯಾವ ಯಾವ ನಂಬರ್‌ಗಳಿಂದ ಬೆದರಿಕೆಯ ಕರೆಗಳು ಬಂದಿತ್ತು ಎಂಬ ಮಾಹಿತಿಯನ್ನು ಪಡೆದು ತೆರಳಿದ್ದಾರೆ.

ಬೆದರಿಕೆ ಹಾಕಿದವರ ವಿರುದ್ಧ ದೂರು ನೀಡಿದ ಪ್ರಥಮ್:

ನಟ ದರ್ಶನ್ ಅವರ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ಪ್ರಥಮ್ ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ಪಿಗೆ ಮಂಗಳವಾರ ಲಿಖಿತ ದೂರು ನೀಡಿದರು. ಬಳಿಕ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಸ್.ಪಿ ಕಚೇರಿ ಮುಂದೆ ಧರಣಿ ಕುಳಿತರು. ಪೊಲೀಸರು ಅವರ ಮನವೊಲಿಸಿ ಕಳುಹಿಸಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ಅವರು, ನನಗೆ ದರ್ಶನ್ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ. ನನಗೆ ಏನಾದರೂ ಆದರೆ ದರ್ಶನ್ ಅವರೇ ಕಾರಣ. ದರ್ಶನ್ ಅವರಿಗೆ ಸಾಮಾನ್ಯ ಜ್ಞಾನ ಇಲ್ವಾ? ಅವರು ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು ಎಂದರು.