ನ್ಯೂಸ್

ಕೇಂದ್ರ ಸಚಿವ ಕೌಶಲ್ ಕಿಶೋರ್ ಪುತ್ರ ವಿಕಾಸ್ ವಿರುದ್ಧ ಎಫ್ಐಆರ್ ದಾಖಲು

ಲಕ್ನೋ: ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಪುತ್ರ ವಿಕಾಸ್ ಕಿಶೋರ್ ವಿರುದ್ಧ ಲಕ್ನೋ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ವಿಕಾಸ್ ಕಿಶೋರ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.

ಏತನ್ಮಧ್ಯೆ, ಅಜಯ್ ರಾವತ್, ಅಂಕಿತ್ ವರ್ಮಾ ಮತ್ತು ಶಮೀಮ್ ಅಲಿಯಾಸ್ ಬಾಬಾ ಎಂಬುವವರನ್ನು ಕಿಶೋರ್ ಅವರ ಮನೆಯಲ್ಲಿ ವಿನಯ್ ಎಂಬುವವರ ಮೇಲೆ ಗುಂಡು ಹಾರಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ
ಲಕ್ನೋದ ದುಬಗ್ಗಾದಲ್ಲಿರುವ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಬಿಜೆಪಿ ಕಾರ್ಯಕರ್ತ ವಿನಯ್ ಶ್ರೀವಾಸ್ತವ್ ಅವರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೇಗೇರಿಯ ಫರಿದಿಪುರ ನಿವಾಸಿ ವಿನಯ್ ಶ್ರೀವಾಸ್ತವ ಬಿಜೆಪಿ ಕಾರ್ಯಕರ್ತನಾಗಿದ್ದು, ಸಚಿವರ ಪುತ್ರ ವಿಕಾಸ್ ಕಿಶೋರ್ ಅಲಿಯಾಸ್ ಆಶು ಜೊತೆ ವಾಸವಿದ್ದರು.

ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ವಿನಯ್ ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಮೃತದೇಹ ಹಾಸಿಗೆಯ ಬಳಿ ನೆಲದ ಮೇಲೆ ಬಿದ್ದಿತ್ತು. ಅರುಣ್ ಪ್ರತಾಪ್ ಸಿಂಗ್ ಅಲಿಯಾಸ್ ಬಂಟಿ, ಶಮೀಮ್ ಬಾಬಾ, ಅಂಕಿತ್ ವರ್ಮಾ, ಅಜಯ್ ರಾವತ್ ಮತ್ತು ಇಬ್ಬರು ಅಪರಿಚಿತರು ಸ್ಥಳದಲ್ಲಿ ಹಾಜರಿದ್ದರು.

ಆ ನಂತರ ಅಜಯ್, ಅಂಕಿತ್ ಮತ್ತು ಶಮೀಮ್ ಮೇಲೆ ಕೊಲೆ ಆರೋಪ ಹೊರಿಸಿ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಬಹಿರಂಗಪಡಿಸಿದ ಪೊಲೀಸರು, ಕುಡಿದ ಅಮಲಿನಲ್ಲಿ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಜೂಜಿನ ಆಟದಲ್ಲಿ ಸೋಲು-ಗೆಲುವಿನ ನಂತರ ಶುರುವಾದ ವಿವಾದ ಪಿಸ್ತೂಲಿನಿಂದ ಗುಂಡು ಹಾರುವಷ್ಟರ ಮಟ್ಟಿಗೆ ಹೋಗಿದೆ ಎನ್ನಲಾಗಿದೆ.

ಯುವಕರ ಬಂಧನ
ಕೇಂದ್ರ ಸಚಿವರ ನಿವಾಸದಲ್ಲಿ ನಡೆದ ಹತ್ಯೆಯ ಮಾಹಿತಿ ಸಿಕ್ಕ ತಕ್ಷಣ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಸ್ಥಳೀಯ ಪೊಲೀಸರು ಸೇರಿದಂತೆ ಎಲ್ಲಾ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಅಜಯ್ ರಾವತ್, ಅಂಕಿತ್ ವರ್ಮಾ ಮತ್ತು ಶಮೀಮ್ ಅಲಿಯಾಸ್ ಬಾಬಾ ಮೂವರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.